ಮೈಸೂರು ನಗರದ ಕಲಾಮಂದಿರದಲ್ಲಿ ಗುರುವಾರ ಅಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾ ಚರಣೆ ಕಾರ್ಯಕ್ರಮದಲ್ಲಿ ಡಾ.ಫ.ಗು.ಹಳಕಟ್ಟಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಶ್ರೀ ನಟರಾಜಸ್ವಾಮೀಜಿ, ನಿತೀಶ್ ಪಾಟೀಲ್, ಕವಿ ಕೆ.ಸಿ ಶಿವಪ್ಪ, ಡಾ.ಪಿ. ಶಿವರಾಜ್, ಎಸ್.ವಿ. ಬಸವರಾಜು, ನಿರ್ಮಲ ಮಠಪತಿ ಹಾಗೂ ಇತರರು ಇದ್ದರು.
ಮೈಸೂರು: ವಚನ ಸಾಹಿತ್ಯ ಸಂರಕ್ಷಿಸಿದ ಡಾ.ಫ.ಗು. ಹಳಕಟ್ಟಿ ಕನ್ನಡದ ಮಹಾನ್ ಸಾಂಸ್ಕೃತಿಕ ಸೇತುವೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೀಶ್ ಪಾಟೀಲ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಪಾಲಿಕೆ ಹಾಗೂ ಡಾ.ಫ.ಗು.ಹಳಕಟ್ಟಿ ಜಯಂತ್ಯುತ್ಸವ ಸಮಿತಿ ವತಿಯಿಂದ ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವಚನಗಳನ್ನು ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಿ ಸಂಗ್ರಹಿಸಿ, ಅವುಗಳನ್ನು ಕನ್ನಡದ ಅಮೂಲ್ಯ ಪರಂಪರೆಯಾಗಿ ಉಳಿಸಿದ ಡಾ.ಫ.ಗು.ಹಳಕಟ್ಟಿಯವರ ಸಾಧನೆ ಕನ್ನಡ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಅವರು ಕೇವಲ ಸಂಶೋಧಕರಾಗಿರಲಿಲ್ಲ ಕನ್ನಡದ ಆತ್ಮವನ್ನು ಮುಂದಿನ ತಲೆಮಾರಿಗೆ ತಲುಪಿಸಿದ ಮಹಾನ್ ಸಾಂಸ್ಕೃತಿಕ ಸೇತುವೆಯಾಗಿದ್ದರು ಎಂದು ಬಣ್ಣಿಸಿದರು.
ಜ್ಞಾನದಾನ ಎಂದರೆ ಕೇವಲ ಪುಸ್ತಕಗಳನ್ನು ನೀಡುವುದಲ್ಲ, ಚಿಂತಿಸುವ ಮನಸ್ಸನ್ನು ಬೆಳೆಸುವುದು, ಪ್ರಶ್ನಿಸುವ ಧೈರ್ಯವನ್ನು ಮೂಡಿ ಸುವುದು ಮತ್ತು ಉತ್ತಮ ಸಮಾಜವನ್ನು ನಿರ್ಮಿಸುವುದು. ಇದೇ ಡಾ. ಫ.ಗು. ಹಳಕಟ್ಟಿಯವರ ಜೀವನದ ಶಾಶ್ವತ ಸಂದೇಶವಾಗಿದೆ ಎಂದರು.
ಇಂತಹ ಮಹನೀಯರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ, ವಿಶೇಷವಾಗಿ ಯುವಜನತೆಯಲ್ಲಿ ಕನ್ನಡದ ಬಗ್ಗೆ ಪ್ರೀತಿ, ಓದುವ ಹವ್ಯಾಸ ಮತ್ತು ಮೌಲ್ಯಾಧಾರಿತ ಬದುಕಿನ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಈ ಕಾರ್ಯಕ್ರಮ ಕೇವಲ ಆಚರಣೆಯಲ್ಲ, ಅದು ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಹಸ್ತಾಂತರಿಸುವ ಪವಿತ್ರ ಸಂಕಲ್ಪವಾಗಿದೆ ಎಂದು ಹೇಳಿದರು.
ಗಾವಡಗೆರೆಯ ಶ್ರೀ ಗುರುಲಿಂಗಜಂಗಮ ದೇವರ ಮಠದ ಶ್ರೀ ನಟರಾಜಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಫ.ಗು. ಹಳಕಟ್ಟಿ ಶ್ರಮಿಸದೇ ಇದ್ದರೆ ಶರಣರ ಅಮೂಲ್ಯ ವಚನ ಸಾಹಿತ್ಯವು ಕಾಲಗರ್ಭದಲ್ಲಿ ನಶಿಸಿ ಹೋಗುತ್ತಿತ್ತು. ವಚನಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಅವು ಇಡೀ ಮಾನವಕುಲವನ್ನು ಒಂದುಗೂಡಿಸುವ ಶಕ್ತಿ ಹೊಂದಿವೆ ಎಂಬುದನ್ನು ಜಗತ್ತಿಗೆ ಸಾರಿದವರು ಹಳಕಟ್ಟಿಯವರು ಎಂದರು.
ಕವಿ ಕೆ.ಸಿ ಶಿವಪ್ಪ ಮಾತನಾಡಿ, 12ನೇ ಶತಮಾನದ ಶರಣರ ಚಿಂತನೆಗಳನ್ನು ನಮಗೆ ಮರಳಿ ತಂದುಕೊಟ್ಟ ಮಹಾಪುರುಷ ಡಾ.ಫ. ಗು. ಹಳಕಟ್ಟಿ. ಇವರನ್ನು ಇಡೀ ನಾಡು ಅತ್ಯಂತ ಪ್ರೀತಿ ಮತ್ತು ಗೌರವದಿಂದ ವಚನ ಪಿತಾಮಹ ಎಂದು ಕರೆಯುತ್ತದೆ. 12ನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ನೂರಾರು ಶರಣರು ರಚಿಸಿದ ವಚನಗಳು ಕಾಲಗರ್ಭದಲ್ಲಿ ಕಳೆದುಹೋಗಿದ್ದವು. ಮಠಗಳ ಕತ್ತಲೆ ಕೋಣೆಗಳಲ್ಲಿ, ಮನೆಗಳ ಮೂಲೆಗಳಲ್ಲಿ ತಾಳೆಗರಿಗಳು ಗೆದ್ದಲು ಹಿಡಿಯುತ್ತಿದ್ದವು. ಇದನ್ನು ಕಂಡು ಅವರು ನಮ್ಮ ಇತಿಹಾಸದ ಈ ರತ್ನಗಳು ಹೀಗೆ ನಾಶವಾಗಬಾರದು ಎಂದು ಅವರು ಪಣತೊಟ್ಟು ವಚನಗಳನ್ನು ಸಂಗ್ರಹಿಸಿ ಸಮಾಜಕ್ಕೆ ನೀಡಿದರು ಎಂದು ಹೇಳಿದರು.
ಈ ಸಂದರ್ಭ ಡಾ. ಮಹೇಂದ್ರ ಮೂರ್ತಿ ದೇವನೂರು ರಚಿಸಿದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಕೃತಿಯನ್ನು ಕವಿ ಕೆ.ಸಿ ಶಿವಪ್ಪ ಬಿಡುಗಡೆ ಮಾಡಿದರು. ಶರಣ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನ ಸಲ್ಲಿಸಿದ ಮ.ಗು.ಸದಾನಂದಯ್ಯ, ಡಾ.ಹೆಳವರಹುಂಡಿ ಸಿದ್ದಪ್ಪ, ಪ್ರೊ.ಚಂದ್ರಶೇಖರಯ್ಯ, ಡಾ.ಲತಾ ರಾಜಶೇಖರ್, ಪ್ರೊ.ಎಸ್. ಶಿವರಾಜಪ್ಪ, ಶಕುಂತಲ ಜಯದೇವು, ಎಲ್.ಶಿವಲಿಂಗಪ್ಪ, ಶಾರದಾ ಶಿವಲಿಂಗಸ್ವಾಮಿ, ಎಂ.ಎ.ನೀಲಾಂಬಿಕೆ, ಡಿ.ಎನ್.ಲೋಕಪ್ಪ, ವಚನ ಕುಮಾರಸ್ವಾಮಿ, ಚೌಹಳ್ಳಿ ಲಿಂಗರಾಜಪ್ಪ, ಕಲ್ಮಳ್ಳಿ ನಟರಾಜು ಹಾಗೂ ವಚನ ಚೂಡಾಮಣಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಆಯುಕ್ತ ಡಾ. ಪಿ. ಶಿವರಾಜ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್.ವಿ ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ನಿರ್ಮಲ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ ಸುದರ್ಶನ್, ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಡಾ. ಕೆ.ಬಿ ಲಿಂಗರಾಜು, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಪಿ ವಿರೂಪಾಕ್ಷ, ಖಜಾಂಚಿ ಭೀಮಾರಹಳ್ಳಿ ಜಯಶಂಕರ್, ಪ್ರಧಾನ ಸಂಚಾಲಕ ದೇವರಾಜು ಪಿ. ಚಿಕ್ಕಹಳ್ಳಿ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಸ್. ಪುಟ್ಟರಾಜಪ್ಪ, ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ ಮಲ್ಲೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಗೂ ಇತರರು ಇದ್ದರು.