ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ನಗರದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ, ಜಯಪ್ಪ ಹೊನ್ನಾಳಿ, ಸುಜಾತಾ, ಶೋಭಾರಾಣಿ ಜೈಪ್ರಕಾಶ್ ಇತರರು ಇದ್ದರು. 
ಮೈಸೂರು

ವಚನ ಸಾಹಿತ್ಯ ಜೀವನದ ಮಾರ್ಗದರ್ಶಿ: ವಚನ ಕುಮಾರಸ್ವಾಮಿ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ವಚನಗಳ ಸಂದೇಶವು ಮನಸ್ಸನ್ನು ಸ್ಥಿರಗೊಳಿಸಿ ಗುರಿಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ
  • ಪ್ರೀತಿ, ಸ್ನೇಹ, ವಾತ್ಸಲ್ಯ, ಕಾಯಕ ಮತ್ತು ದಾಸೋಹದಂತಹ ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತುವ ವಚನಗಳು ವಿದ್ಯಾರ್ಥಿಗಳ ಬದುಕಿಗೆ ಅಕ್ಷರಶಃ ದಾರಿದೀಪವಾಗಿವೆ
ಮೈಸೂರು:ದಾರಿ ತಪ್ಪಿದ ಬದುಕಿಗೆ ವಚನ ಸಾಹಿತ್ಯ ದೀಪಸ್ತಂಭ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ನಗರ ಘಟಕ ಹಾಗೂ ಕದಳಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಜಯಲಕ್ಷ್ಮೀಪುರಂನ ಮಹಾಜನ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಆಂದೋಲನ ದತ್ತಿ, ಬೆಳಕವಾಡಿ ಲಿಂಗೈಕ್ಯ ಮಹದೇವಮ್ಮ ಪಟೇಲ್ ಶಿವರುದ್ರಪ್ಪ ದತ್ತಿ ಹಾಗೂ ಡಾ.ಎಸ್.ಎ.ಪುಟ್ಟಸ್ವಾಮಿ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಚನ ಸಾಹಿತ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ, ನೈತಿಕ ಮೌಲ್ಯಗಳ ಬೆಳವಣಿಗೆಗೆ ಹಾಗೂ ಏಕಾಗ್ರತೆಯನ್ನು ಬೆಳೆಸುವ ಜೀವನ ಮಾರ್ಗದರ್ಶಿಯಾಗಿದೆ. ಇಂದಿನ ವಿದ್ಯಾರ್ಥಿಗಳು ಅನೇಕ ಆಕರ್ಷಣೆಗಳು ಮತ್ತು ಗೊಂದಲಗಳ ನಡುವೆ ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ವಚನಗಳ ಸಂದೇಶವು ಅವರ ಮನಸ್ಸನ್ನು ಸ್ಥಿರಗೊಳಿಸಿ ಗುರಿಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಜಯಪ್ಪ ಹೊನ್ನಾಳಿ ಮಾತನಾಡಿ, ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ದಯೆ, ಕರುಣೆ, ಅನುಕಂಪ, ಪ್ರೀತಿ, ಸ್ನೇಹ, ವಾತ್ಸಲ್ಯ, ಕಾಯಕ ಮತ್ತು ದಾಸೋಹದಂತಹ ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತುವ ವಚನಗಳು ವಿದ್ಯಾರ್ಥಿಗಳ ಬದುಕಿಗೆ ಅಕ್ಷರಶಃ ದಾರಿದೀಪವಾಗಿವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾಜನ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಮಾತನಾಡಿ, ವಚನ ಸಾಹಿತ್ಯವು ವಿದ್ಯಾರ್ಥಿಗಳಲ್ಲಿ ವಿವೇಚನೆ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಜಾಗೃತಿಗೊಳಿಸುತ್ತದೆ ಎಂದರು.
ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್ ಮಾತನಾಡಿ, ನಾವು ಆಡುವ ಮಾತುಗಳು ಮುತ್ತಿನ ಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು ಮತ್ತು ಸ್ಫಟಿಕದ ಸಲಾಕೆಯಂತಿರಬೇಕು. ನಮ್ಮ ಸನ್ಮಾರ್ಗದ ನುಡಿಗಳಿಗೆ ಆ ಶಿವನು ಕೂಡ ತಲೆದೂಗುವಂತಿರಬೇಕು ಎಂದರು.
ದತ್ತಿ ದಾಸೋಹಿಗಳಾದ ಶಿವರುದ್ರಪ್ಪ , ಸೌಮ್ಯಾ ಇತರರು ಇದ್ದರು.