ಅಪರಾಧ 
ಮೈಸೂರು

ಗಂಧದ ತುಂಡು ಸಾಗಿಸುತ್ತಿದ್ದ ಆರೋಪಿ ಬಂಧನ

ಪ್ರಮುಖ ಮುಖ್ಯಾಂಶಗಳು

  • ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮೈಸೂರು: ಮೂರ‌್ನಾಲ್ಕು ದಿನಗಳ ಹಿಂದೆ ಕತ್ತರಿಸಿದ್ದ ಗಂಧದ ಮರವನ್ನು ತುಂಡುಗಳಾಗಿ ಮಾಡಿ ಮನೆಗೆ ಸಾಗಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕೆಸರೆ ಬಡಾವಣೆ ಉಸ್ಮಾನಿಯಾ ಬ್ಲಾಕ್ ನಿವಾಸಿ ನವಾಜ್ ಷರೀಫ್(32) ಬಂಧಿತನಾಗಿದ್ದು, ಸೋಮವಾರ ಈತ ಸಾಗಿಸುತ್ತಿದ್ದ 33 ಕೆಜಿ 690 ಗ್ರಾಂ ತೂಕದ ತೊಗಟೆ ಸಹಿತ 9 ಹಸಿ ಗಂಧದ ಮರದ ತುಂಡುಗಳು, ಚಕ್ಕೆಗಳು, ಮೊಬೈಲ್ ಹಾಗೂ ಬಜಾಜ್ ಪಲ್ಸರ್(ಕೆಎ-03, ಎಚ್‌ಸಿ-5702) ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಘಟಕದ ಸಂಘಟಿತ ಅಪರಾಧ ಮತ್ತು ರೌಡಿ ಪ್ರತಿಬಂಧಕ ದಳದ ಇನ್‌ಸ್ಪೆಕ್ಟರ್ ಶಬ್ಬಿರ್ ಹುಸೇನ್ ಹಾಗೂ ಸಿಬ್ಬಂದಿ ಸೋಮವಾರ ಮಧ್ಯಾಹ್ನ ಹಳೇ ಕೆಸರೆಯ ಕಾಮನಕೆರೆಹುಂಡಿ ಮುಖ್ಯರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಪಲ್ಸರ್ ಬೈಕ್‌ನಲ್ಲಿ ಚೀಲವಿಟ್ಟುಕೊಂಡು ವ್ಯಕ್ತಿಯೊಬ್ಬ ನಿಂತಿದ್ದನ್ನು ಗಮನಿಸಿದ್ದಾರೆ. ಅಷ್ಟರಲ್ಲಿ ಪೊಲೀಸ್ ವಾಹನ ಗಮನಿಸಿ ಗಲಿಬಿಲಿಗೊಂಡ ಆತ ಬೈಕ್ ಸ್ಟಾರ್ಟ್ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ.
ಕೂಡಲೇ ಪೊಲೀಸರು ಆತನನ್ನು ಸುತ್ತುವರೆದು, ಚೀಲವನ್ನು ಪರಿಶೀಲಿಸಿದಾಗ ಗಂಧದ ತುಂಡುಗಳು ಪತ್ತೆಯಾಗಿವೆ. ಈ ಬಗ್ಗೆ ಆರೋಪಿಯನ್ನು ವಿಚಾರಿಸಿದಾಗ, ಕೆಸರೆ ಚಿಕ್ಕೆರೆ ಬಳಿ ಬೆಳೆದಿದ್ದ ಶ್ರೀಗಂಧದ ಮರವನ್ನು ಮೂರು ನಾಲ್ಕು ದಿನಗಳ ಹಿಂದೆ ಕತ್ತರಿಸಿ, ತುಂಡುಗಳನ್ನಾಗಿ ಮಾಡಿಕೊಂಡು ಮನೆಗೆ ಸಾಗಿಸುತ್ತಿದ್ದೆ. ಇವುಗಳ ತೊಗಟೆ ತೆಗೆದು, ಟ್ರಿಮ್ ಮಾಡಿದ ನಂತರ ಮಾರಾಟ ಮಾಡುವ ಯೋಜನೆ ಇತ್ತು ಎಂದು ತಿಳಿಸಿದ್ದಾನೆ.
ಆರೋಪಿ ನವಾಜ್ ಸಾಗಿಸುತ್ತಿದ್ದ ಗಂಧದ ತುಂಡುಗಳು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.