ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿಂಗರಾಜ್ ಮಲ್ಲಾಡಿ, ನಂಜಪ್ಪ ಬಸವನಗುಡಿ, ಎಚ್.ಬಿ.ದಿವಾಕರ್, ಸಿ.ಎಸ್. ಜಗದೀಶ್, ಕೆಂಪರಾಜು, ಗಜೇಂದ್ರ ಇತರರು ಇದ್ದರು. 
ಮೈಸೂರು

ಗ್ಯಾರಂಟಿಗೆ ದಲಿತರ ಹಣ ಬಳಕೆ

ಲೋಕೇಶ್ ಮನು. ಡಿ
ಹುಣಸೂರು : ದಲಿತರಿಗೆ ಮೀಸಲಾದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಹೇಳಿದರು.
ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಹೇಳುತ್ತದೆ. ಅಲ್ಲದೆ ಈ ಸಮುದಾಯಗಳಿಗೆ ಪ್ರತಿ ವರ್ಷ ಬಜೆಟ್‌ನಲ್ಲಿ 16 ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳುವ ಸರ್ಕಾರ ಸಮುದಾಯಗಳ ಅಭಿವೃದ್ಧಿಗೆ ಬಳಸದೆ ರಾಜಕೀಯ ಕಾರಣಗಳಿಂದಾಗಿ ಬಳಸುತ್ತಿರುವುದು ಖಂಡನೀಯ. ಈ ಸಮುದಾಯಗಳು ಜಾತೀಯತೆ, ಅಸ್ಪಶ್ಯತೆ, ಅಸಮಾನತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ನಿವೇಶನ, ವಾಸಿಸಲು ಮನೆ ಸೇರಿದಂತೆ ಮೂಲಸೌಲಭ್ಯಗಳಿಲ್ಲದೆ ಸಂಕಷ್ಟದ ಬದುಕನ್ನು ದೂಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದು 3 ವರ್ಷ ಕಳೆದರೂ ಈ ಸಮುದಾಯಗಳಿಗೆ ವಾಸಿಸಲು ಮನೆ, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಕ್ರಮ ವಹಿಸಿಲ್ಲ ಎಂದು ಟೀಕಿಸಿದರು.
ಶಿಕ್ಷಣ, ಉದ್ಯೋಗದಂತಹ ಕ್ಷೇತ್ರಗಳಿಗೂ ಅನುದಾನವಿಲ್ಲದೆ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಎಸ್‌ಸಿಪಿ/ಟಿಎಸ್‌ಪಿ ಹಣವಿಲ್ಲದೆ ಯಾವುದೆ ಸೌಲಭ್ಯಗಳನ್ನು ಪಡೆಯಲು ಆಗುತ್ತಿಲ್ಲ. ಅಧಿಕಾರಿಗಳು ಸರ್ಕಾರದಿಂದ ಅನುದಾನವೇ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ದಲಿತರ ಹಣವನ್ನು ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರ ದಲಿತರಿಗೆ ಹೇಳುವುದೊಂದು. ಮಾಡುವುದು ಮತ್ತೊಂದಾಗಿದೆ. ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ದಲಿತರ ಬದುಕನ್ನೇ ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಇದು ಈ ಕೂಡಲೇ ನಿಲ್ಲಬೇಕು. ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸದೆ ಈ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು. ತಪ್ಪಿದರೆ ದಸಂಸವು ರಾಜ್ಯವ್ಯಾಪಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಭಾಗೀಯ ಸಂಚಾಲಕ ಸಿ.ಎಸ್ ಜಗದೀಶ್, ಜಿಲ್ಲಾ ಸಂಚಾಲಕ ಎಚ್.ಬಿ.ದಿವಾಕರ್ ರಾಜ್ಯ ಸಂಘಟನಾ ಸಂಚಾಲಕ ಕೆ.ನಂಜಪ್ಪ ಬಸವನಗುಡಿ, ದಸಂಸ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ದೇವೇಂದ್ರ ಕುಳುವಾಡಿ, ನಾಗನಹಳ್ಳಿ ಮಾದೇವ, ಅಬ್ದುಲ್ ಮಾಲಿಕ್, ಶೇಖರ, ಹರೀಶ, ಕೆಬ್ಬೇಕೊಪ್ಪಲು ಶಿವರಾಜ, ಚುಂಚನಕಟ್ಟೆ ಕುಮಾರ, ಕೆ.ಆರ್ ನಗರದ ಪರಶುರಾಮ್, ಜಿಲ್ಲಾ ಮಹಿಳಾ ಸಂಚಾಲಕಿ ಲಕ್ಷ್ಮೀ ಸ್ವಾಮಿ ಭೋವಿ, ಆದಿವಾಸಿ ಮಹಿಳೆಯರಾದ ವಸಂತಾ, ಲಕ್ಷ್ಮೀಬಾಯಿ, ಕಮಲಾಬಾಯಿ, ಡಿ.ದೇವರಾಜ ಅರಸು ಮಹಿಳಾ ಸಂಘದ ನಾಗಲ ಲಕ್ಷ್ಮೀ , ಬಿ.ಆರ್.ಕಾವಲ್ ಗ್ರಾಮದ ಪ್ರಕಾಶ್, ಗೋವಿಂದ, ಕಲ್ಕುಣಿಕೆ, ಗ್ರಾಮದ ಪಾರ್ವತಮ್ಮ, ಕುಮಾರಿ, ಅಂಗವಿಕಲರ ಸಂಘದ ಶಿವಶೆಟ್ಟಿ ಕೆರೆಯೂರು, ಎನ್.ಎಸ್.ತಿಟ್ಟಿನ ನೇತ್ರಾ, ಕಾಳಮ್ಮ, ಪವಿತ್ರಾ, ಅಂಬೇಡ್ಕರ್ ನಗರದ ದಾಸಪ್ಪ ಶೋಭಮ್ಮ ಇತರರು ಭಾಗವಹಿಸಿದ್ದರು.