ಕರ್ಜನ್ ಪಾರ್ಕ್‌ನ ಡಾ.ಎಂ.ಎಚ್.ಮರೀಗೌಡ ಸಭಾಂಗಣ ಸೋಮವಾರ ‘ಹಣ್ಣು-ಹೊನ್ನು’ ಬಾನುಲಿ ಸರಣಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ವಿಷ್ಣವರ್ಧನ, ಡಾ.ಹಂಚಿನಮನಿ, ಡಾ.ಎಚ್.ಎಂ.ನಾಗರಾಜ್, ಎನ್. ಕೇಶವಮೂರ್ತಿ ಇತರರಿದ್ದರು. 
ಮೈಸೂರು

ಕೃಷಿಯಲ್ಲಿ ಜೈವಿಕ ಗೊಬ್ಬರ ಬಳಸಿ

ಅವಿನಾಶ್ ಜೈನಹಳ್ಳಿ
ಮೈಸೂರು: ಕೃಷಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳನ್ನು ಬಳಸಿಕೊಂಡರೆ ಮುಂದಿನ ಪೀಳಿಗೆಗೆ ಉತ್ತಮ ಕೃಷಿ ಭೂಮಿ ಹಾಗೂ ಉತ್ತಮ ಪರಿಸರವನ್ನು ನೀಡಬಹುದು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಅಭಿಪ್ರಾಯಪಟ್ಟರು.
ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಆಕಾಶವಾಣಿ ವತಿಯಿಂದ ಕರ್ಜನ್ ಪಾರ್ಕ್‌ನ ಡಾ.ಎಂ.ಎಚ್.ಮರೀಗೌಡ ಸಭಾಂಗಣ ಸೋಮವಾರ ‘ಹಣ್ಣು-ಹೊನ್ನು’ ಬಾನುಲಿ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಭೂಮಿಯನ್ನು ಬೇರೆ ಬೇರೆ ಉದ್ಯಮಗಳಿಗೆ ಅತಿಯಾಗಿ ಬಳಸಿಕೊಳ್ಳುತ್ತಿದ್ದು, ಪ್ರತಿ ವರ್ಷವು ಕೃಷಿ ಭೂಮಿ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇಂದಿನ ಯುವಕರು ಕೃಷಿ ಭೂಮಿ ಇದ್ದರೂ ಪಟ್ಟಣದ ಕಡೆಗೆ ಮುಖ ಮಾಡಿದ್ದಾರೆ ಎಂದರು.
ಕರ್ನಾಟಕ ಅತಿಹೆಚ್ಚು ತೆಂಗು ಬೆಳೆಯಲು ಮುಂದಾಗಿದೆ. ಇದೇ ರೀತಿ ತೋಟಗಾರಿಕೆಯಲ್ಲಿ ಲಾಭದಾಯಕವಾದ ಹಲವಾರು ಬೆಳೆಗಳಿದ್ದು, ರೈತರು ತೋಟಗಾರಿಕೆ ಬೆಳವಣಿಗೆಯನ್ನು ಹೆಚ್ಚು ಮಾಡಬೇಕು. ಮಿಶ್ರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಹಂಚಿನಮನಿ ಮಾತನಾಡಿ, ವಿದೇಶಗಳಲ್ಲಿ ಬೆಳೆಯಲಾಗದ ಹಲವು ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಬೆಳೆಯಬಹುದು. ವಿದೇಶದ ಮಾರುಕಟ್ಟೆಗಳಲ್ಲಿ ಭಾರತದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇರುತ್ತದೆ. ಹೊರ ದೇಶಕ್ಕೆ ರಫ್ತು ಮಾಡುವ ಗುಣಮಟ್ಟವಿರುವ ಬೆಳೆಗಳನ್ನು ಬೆಳೆಯಿರಿ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ರೈತರು ಬೇಡಿಕೆ ಇರುವ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು. ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಿ ಸಂರಕ್ಷಿಸುವ ಕಡೆ ಚಿಂತಿಸಬೇಕು ಎಂದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಚ್.ಎಂ.ನಾಗರಾಜ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ ಇತರರಿದ್ದರು.