ಮೈಸೂರಿನ ಎಸ್‌ಡಿಎಂಐಎಂಡಿ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಿಪಿಎಂ ಇಂಡಿಯಾ ಕಂಪನಿಯ ಚೀಫ್ ಆಫ್ ಪೀಪಲ್ ಡಾ. ಕಿರಣ್‌ಪ್ರೀತ್ ಕೌರ್ ಉದ್ಘಾಟಿಸಿದರು. ರಾಜೇಶ್ ಝಾ, ಡಾ.ಎಸ್.ಎನ್. ಪ್ರಸಾದ್, ಡಾ. ಮೌಸುಮಿ ಸೇನ್‌ಗುಪ್ತಾ ಹಾಗೂ ಇತರರು ಇದ್ದರು. 
ಮೈಸೂರು

ಉದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ತಂತ್ರಜ್ಞಾನ ಬಳಕೆ ಅಗತ್ಯ : ಡಾ. ಕಿರಣ್‌ಪ್ರೀತ್ ಕೌರ್

ಮೈಸೂರು: ಔದ್ಯೋಗಿಕ ಕ್ಷೇತ್ರದಲ್ಲಿ ಉದ್ಯೋಗಿಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಹಾಗೂ ಸವಾಲುಗಳಿಗೆ ಉತ್ತರ ಕಂಡುಕೊಳ್ಳು ವಲ್ಲಿ ತಂತ್ರಜ್ಞಾನ ಬಹುದೊಡ್ಡ ಕೊಡುಗೆ ನೀಡಬಲ್ಲದು ಎಂದು ಸಿಪಿಎಂ ಇಂಡಿಯಾ ಕಂಪನಿಯ ಚೀಫ್ ಆಫ್ ಪೀಪಲ್ ಡಾ. ಕಿರಣ್‌ಪ್ರೀತ್ ಕೌರ್ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಪಾರ್ ಮ್ಯಾನೇಜ್ಮೆಂಟ್ ಡೆವಲಪ್‌ಮೆಂಟ್ (ಎಸ್‌ಡಿಎಂಐಎಂಡಿ) ಸಂಸ್ಥೆಯು ಬಿಸಿಐಸಿ- ಎಸ್‌ಡಿಎಂಎಂಡಿ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಎಕ್ಸ್‌ಲೆನ್ಸ್ ಸಹಯೋಗದಲ್ಲಿ ಆಯೋಜಿಸಿರುವ ‘ಎಚ್‌ಆರ್ 5.0: ಹ್ಯೂಮನ್ ಸೆಂಟ್ರಿಕ್ ಫ್ಯೂಚರ್’ ಕುರಿತ 13ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಔದ್ಯೋಗಿಕ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ನೈತಿಕ ನೆಲೆಗಟ್ಟಿನಲ್ಲಿ, ಬಹು ಪರಿಣಾಕಾರಿಯಾಗಿ ಉಪಯೋಗಿಸುವ ಜವಾಬ್ದಾರಿ ಮಾನವ ಸಂಪನ್ಮೂಲ ವಿಭಾಗದ ಮೇಲಿದೆ ಎಂದು ಹೇಳಿದರು.
ಮಾನವ ಸಂಪನ್ಮೂಲ ವಿಭಾಗವು ಯಾವುದೇ ಸಂಸ್ಥೆಯ ಕಾರ್ಯ ನಿರ್ವಹಣೆಯ ಮೂಲ ತಳಹದಿಯಾಗಿದ್ದು, ಈ ಕ್ಷೇತ್ರದಲ್ಲಿ ಯಾವುದೇ ಉದ್ದೇಶ ಅಥವಾ ಆಶಯಕ್ಕಿಂತಲೂ ಅದರಿಂದಾಗಬಹುದಾದ ಪರಿಣಾಮವೇ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ಮಾನವ ಸಂಪನ್ಮೂಲ ವಿಭಾಗವು ತೀವ್ರವಾಗಿ ಪ್ರಗತಿ ಕಾಣುತ್ತಿದ್ದು, ಇಂದಿನ ಎಚ್‌ಆರ್ ಮ್ಯಾನೇಜರ್‌ಗಳು ಆ ಪ್ರಗತಿಯ ಗತಿಗೆ ತಕ್ಕಂತೆ ಚುರುಕಾಗಿದ್ದು, ಹೊಸ ಬದಲಾವಣೆಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕಿದೆ ಹಾಗೂ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮಾನವ ಸಂಪನ್ಮೂಲ ವಿಭಾಗವು ಬಹುದೊಡ್ಡ ಬದಲಾವಣೆಯ ಘಟ್ಟದಂಚಿನಲ್ಲಿ ನಿಂತಿದೆ. ಪ್ರಸ್ತುತ ಎಲ್ಲ ಕಾರ್ಪೋರೇಟ್ ಹಾಗೂ ಇತರೆ ಕ್ಷೇತ್ರದಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಗಳು ಸಂಪೂರ್ಣವಾಗಿ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದು, ಮಾನವ ಸಂಪನ್ಮೂಲ ವಿಭಾಗದ ಕ್ಷಮತೆ ಹಾಗೂ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೋವಿಡ್ ನಂತರ ಎಲ್ಲ ಕಾರ್ಯಕ್ಷೇತ್ರಗಳು, ಒಂದು ಕಾಲದಲ್ಲಿ ಊಹೆಗೂ ನಿಲುಕದಂತಿದ್ದ ಕೆಲವು ವಿಭಿನ್ನ ಕಾರ್ಯವಿಧಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ ಎಂದು ಹೇಳಿದರು.
ಎಬಿಬಿ ಕಂಪನಿಯ ಕಂಟ್ರಿ ಸಸ್ಟೇನೇಬಿಲಿಟಿ ಮ್ಯಾನೇಜರ್ ರಾಜೇಶ್ ಝಾ ಮಾತನಾಡಿ, ಯಾವುದೇ ಸಂಸ್ಥೆಯು ತನ್ನ ಗುರಿಯನ್ನು ಸಮರ್ಥ ರೀತಿಯಲ್ಲಿ ತಲುಪುವಂತೆ ಮಾಡುವಲ್ಲಿ ಮಾನವ ಸಂಪನ್ಮೂಲ ವಿಭಾಗವು ವಹಿಸಿಕೊಳ್ಳುವ ಜವಾಬ್ದಾರಿ ಬಹುದೊಡ್ಡದು. ಮಾನವ ಸಂಪನ್ಮೂಲ ವಿಭಾಗವು ತೆಗೆದುಕೊಳ್ಳುವ ಒಂದೇ ಒಂದು ನಿರ್ಧಾರ ಕೂಡ ಇಡೀ ಸಂಸ್ಥೆಯ ಮೇಲೆ ಮಹತ್ತರ ಪರಿಣಾಮ ಬೀರಬಲ್ಲದು ಎಂದರು.
ಯಾವುದೇ ಸಂಸ್ಥೆಯು ಸುಸ್ಥಿರತೆ ಸಾಧಿಸಬೇಕಾದಲ್ಲಿ ಬಹು ಹಂತಗಳಲ್ಲಿ, ಬಹುವಿಧಾನಗಳಲ್ಲಿ ಕಾರ್ಯನಿರ್ವಹಿಸುವುದು ಅವಶ್ಯಕ ಹಾಗೂ ಇದಕ್ಕಾಗಿ ಉದ್ಯೋಗಿಗಳಿಗೆ ಆರೋಗ್ಯಕರ ವಾತಾವರಣವನ್ನು ನಿರ್ಮಿಸಿಕೊಡುವುದು ತುಂಬಾ ಮುಖ್ಯವಾಗಿದೆ. ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಕ್ಷೇಮ, ಸುರಕ್ಷತೆ, ಸಮುದಾಯಗಳ ಭಾಗವಹಿಸುವಿಕೆ, ಸಾಮಾಜಿಕ ಜವಾಬ್ದಾರಿಗಳ ನಿರ್ವಹಣೆ ಇವೆಲ್ಲವೂ ಸುಸ್ಥಿರತೆಯೆಡೆಗೆ ಕೊಂಡೊಯ್ಯುವ ಅವಕಾಶಗಳಾಗಿದ್ದು, ಮಾನವ ಸಂಪನ್ಮೂಲ ವಿಭಾಗವು ಇದರ ಬಗೆಗೆ ಹಚ್ಚು ಗಮನಹರಿಸಬೇಕು ಎಂದು ವಿಶ್ಲೇಷಿಸಿದರು.
ಎಸ್‌ಡಿಎಂಐಎಮ್‌ಡಿ ನಿರ್ದೇಶಕ ಡಾ.ಎಸ್.ಎನ್. ಪ್ರಸಾದ್ ಅವರು ಅತ್ಯಂತ ಸೂಕ್ಷ್ಮವಾದ ಕೆಲವು ಎಚ್‌ಆರ್ ಪಾಲಿಸಿಗಳು ಹಾಗೂ ಈ ಪ್ರಸ್ತುತ ಮಾನವ ಸಂಪನನ್ಮೂಲ ಕ್ಷೇತ್ರದಲ್ಲಾಗುತ್ತಿರುವ ಕೆಲವು ಚರ್ಚಾಸ್ಪದ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲಿದರು.
ಎಸ್‌ಡಿಎಂಐಎಮ್‌ಡಿ ಮೈಸೂರಿನ ಡೀನ್ ಡಾ. ಮೌಸುಮಿ ಸೇನ್‌ಗುಪ್ತಾ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಅನಾಲಿಟಿಕ್ಸ್ ಮತ್ತು ಅಟೋಮೇಶನ್‌ನಂತಹ ತಂತ್ರಜ್ಞಾನಗಳು ಹಾಗೂ ಸಹಾನುಭೂತಿ ಎಲ್ಲರನ್ನೂ ಒಳಗೊಳ್ಳುವಿಕೆ ಹಾಗೂ ಕಾರ್ಯಕ್ಷೇತ್ರದಲ್ಲಿರಬೇಕಾದ ಸಹಜ ಮಾನವ ಸಂಬಂಧಗಳು ಒಟ್ಟಿಗೇ ಸಾಗಬೇಕಾದ ಅನಿವಾರ್ಯತೆಯ ಬಗೆಗೆ ಬೆಳಕು ಚೆಲ್ಲಿದರು.