ಕೃಷಿ ಭೂಮಿ ಉಳಿಸಿ ಅಭಿಯಾನ ಕುರಿತು ಮೈಸೂರು ಜಿಲ್ಲೆಯ ಗ್ರಾಮವೊಂದರಲ್ಲಿ ಅಧಿಕಾರಿಗಳು ಅರಿವು ಮೂಡಿಸಿದರು. ಡಾ.ಬಿ.ಎನ್.ಜ್ಞಾನೇಶ್, ಎಚ್.ವಿ.ದಿವ್ಯಾ, ಶಾಮರಾಜ್, ಡಾ.ರಕ್ಷಿತ್‌ರಾಜ್, ಡಾ.ಜಿ.ಎಂ.ವಿನಯ್, ಡಾ.ವೈ.ಪಿ.ಪ್ರಸಾದ್, ಡಾ.ದೀಪಕ್ ಇತರರಿದ್ದರು.
ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಶ್ ಸಲಹೆ
ಸುತ್ತೂರು: ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ರೈತರು ಕೃಷಿ ಭೂಮಿಗೆ ಅತಿಯಾದ ಹಾಗೂ ಅವೈಜ್ಞಾನಿಕವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು. ಕೀಟ ಹಾಗೂ ರೋಗಗಳ ಹತೋಟಿಗೆ ಅತಿಯಾಗಿ ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕುಸಿಯಲಿದೆ ಎಂದು ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಶ್ ತಿಳಿಸಿದ್ದಾರೆ.
ಕೃಷಿ ಭೂಮಿ ಫಲವತ್ತತೆ ರಕ್ಷಿಸಿ, ಸುಸ್ಥಿರ ಬೇಸಾಯಕ್ಕೆ ಉತ್ತೇಜನ ನೀಡಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದಿಂದ ಮಹತ್ವಾಕಾಂಕ್ಷಿ ಖೇತ್ ಬಚಾವೋ (ಕೃಷಿ ಭೂಮಿ ಉಳಿಸಿ) ಅಭಿಯಾನವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಆಂದೋಲನವು ಜೂನ್ 1ರಿಂದ ಅಧಿಕೃತವಾಗಿ ಪ್ರಾರಂಭವಾಗಿದ್ದು ಜೂನ್ 30ರವೆರೆವಿಗೂ ನಿರಂತರವಾಗಿ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣ್ಣಿನ ಆರೋಗ್ಯದ ಮಹತ್ವ, ವೈಜ್ಞಾನಿಕ ಮಣ್ಣು ಪರೀಕ್ಷೆಯ ಅನಿವಾರ್ಯತೆ, ಸಮತೋಲನ ಪೋಷಕಾಂಶಗಳ ನಿರ್ವಹಣೆ, ಸಾವಯವ ಹಾಗೂ ನೈಸರ್ಗಿಕ ಗೊಬ್ಬರಗಳ ಬಳಕೆ, ಜೀವಾಮೃತ, ಗೋಕೃಪಾಮೃತ, ಬೀಜಾಮೃತಗಳ ಮಹತ್ವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಗ್ರಾಮಗಳಿಗೆ ತೆರಳಿ ರೈತರಿಗೆ ಅರಿವು ಮೂಡಿಸುವುಸುವುದ ಈ ಅಭಿಯಾನದ ಉದ್ದೇಶವಾಗಿದೆ.
ಕೃಷಿ ಕ್ಷೇತ್ರದ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಮಣ್ಣಿನ ಆರೋಗ್ಯ ಕಾಪಾಡುವುದು ಪ್ರಮುಖ ಹೆಜ್ಜೆಯಾಗಿದೆ. ಪ್ರತಿಯೊಬ್ಬರ ರೈತರು ಕಡ್ಡಾಯವಾಗಿ ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿನ ಆರೋಗ್ಯ ಕಾರ್ಡ್ ಆಧಾರದ ಮೇಲೆ ಆಗತ್ಯವಿರುವ ರಸಗೊಬ್ಬರವನ್ನು ಬಳಸಬೇಕು. ಜತೆಗೆ ಅಮೂಲ್ಯವಾದ ಕೃಷಿ ಭೂಮಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಸುರಕ್ಷಿತ ಹಾಗೂ ಫಲವತ್ತಾದ ಸ್ಥಿತಿಯಲ್ಲಿ ಕೃಷಿ ಭೂಮಿಯನ್ನು ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ, ಕೃಷಿ ವಿಜ್ಞಾನ ಕೇಂದ್ರದಲ್ಲಿರುವ 6 ವಿಷಯ ತಜ್ಞರನ್ನು 2 ತಂಡಗಳನ್ನಾಗಿ ವಿಭಜಿಸಿ ಪ್ರತಿ ದಿನ ಜಿಲ್ಲೆಯ ವಿವಿಧ ತಾಲೂಕಿನ 2 ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರು ಅಭಿಯಾನದಲ್ಲಿ ಭಾಗವಹಿಸಿ ರೈತರಿಗೆ ರಸಗೊಬ್ಬರದ ಬಳಕೆ ಹಾಗೂ ಮಣ್ಣು ಪರೀಕ್ಷೆಯ ಅಗತ್ಯವನ್ನು ತಿಳಿಸಿದ್ದಾರೆ.
ಕೃಷಿ ಇಲಾಖೆ, ಮೈಕ್ಯಾಪ್ಸ್, ಐಟಿಸಿ, ಜೆಎಸ್‌ಎಸ್ ಆರ್ಯುವೇದ ಕಾಲೇಜು ಇವರ ಸಹಯೋಗದೊಂದಿಗೆ ಪರಿಯಾಪಟ್ಟಣ ತಾಲೂಕಿನ ಕಣಗಾಲ್, ಕೆ.ಬಸವನಹಳ್ಳಿ, ನಂಜನಗೂಡು ತಾಲೂಕಿನ ಸುತ್ತೂರು, ಚಿನ್ನಂಬಳ್ಳಿ, ಕಿರುಗುಂದ, ಹೊರಳವಾಡಿ, ಆಲಂಬೂರು ಮೈಸೂರು ತಾಲೂಕಿನ ಆಯರಹಳ್ಳಿ ಹಾಗೂ ಹಡಜನ ಗ್ರಾಮಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಎಚ್.ವಿ.ದಿವ್ಯಾ, ಶಾಮರಾಜ್, ಡಾ.ರಕ್ಷಿತ್‌ರಾಜ್, ಡಾ.ಜಿ.ಎಂ.ವಿನಯ್, ಡಾ.ವೈ.ಪಿ ಪ್ರಸಾದ್, ಡಾ.ದೀಪಕ್, ಕೃಷಿ, ತೋಟಗಾರಿಕೆ ಹಾಗೂ ಪಶು ಇಲಾಖೆಯ ಅಧಿಕಾರಿಗಳು ಈ ಅಭಿಯಾನದಲ್ಲಿ ಸಕ್ರಿಯಾಗಿ ತೊಡಗಿಸಿಕೊಂಡಿದ್ದಾರೆ ಎಂದು ಜ್ಞೇನೇಶ್ ತಿಳಿಸಿದ್ದಾರೆ.