ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಪ್ರಯುಕ್ತ ಎಚ್.ಡಿ.ಕೋಟೆ ಪುರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಯಿತು. ಮಿಲ್ ನಾಗರಾಜು, ಟಿ.ರವಿಕುಮಾರ್, ಪಿ. ಸುರೇಶ್ ಇತರರು ಇದ್ದರು.  
ಮೈಸೂರು

ಆರೋಗ್ಯಯುತ ಜೀವನಕ್ಕೆ ಸಿರಿಧಾನ್ಯ ಬಳಸಿ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಮಾಜಿ ಸದಸ್ಯ ಮಿಲ್ ನಾಗರಾಜು ಸಲಹೆ
ಎಚ್.ಡಿ.ಕೋಟೆ: ಮಾನವ ಆಧುನಿಕತೆಗೆ ತೆರೆದುಕೊಂಡಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಇತ್ತೀಚೆಗೆ ಆಹಾರ ಪದಾರ್ಥಗಳು ಕಲುಷಿತಗೊಂಡಿದ್ದು, ಆರೋಗ್ಯ ಸಮಸ್ಯೆಗಳು ಉದ್ಭವಿಸಿವೆ. ಹೀಗಾಗಿ ಸಿರಿಧಾನ್ಯ ಬಳಸುವುದರಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಮಿಲ್ ನಾಗರಾಜು ಅಭಿಪ್ರಾಯಪಟ್ಟರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಪ್ರಯುಕ್ತ ಸಮತಾ ಟ್ರಸ್ಟ್, ಸ್ವರಾಲಯ ಮ್ಯೂಸಿಕ್, ಗಾನವಿ ಮೆಡಿಕಲ್, ನಂಬಿಕೆ ಸಿರಿಧಾನ್ಯ ಪ್ರಾಡಕ್ಟ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ಪುರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ರಾಸಾಯನಿಕ ಗೊಬ್ಬರ ಇಲ್ಲದೆ ಬೆಳೆಗಳನ್ನು ಬೆಳೆಯಲಾರದ ಅನಿವಾರ್ಯ ಪರಿಸ್ಥಿತಿಗೆ ಬಂದಿದ್ದೇವೆ. ಇದರಿಂದ ಬಿ.ಪಿ, ಶುಗರ್, ಕೊಲೆಸ್ಟ್ರಾಲ್‌ನಿಂದ ಪ್ರಾರಂಭವಾಗುವ ಆರೋಗ್ಯ ಸಮಸ್ಯೆಗಳು, ಕಿಡ್ನಿ ವೈಫಲ್ಯ, ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳ ಆಹ್ವಾನಕ್ಕೆ ದಾರಿ ಮಾಡಿಕೊಡುತ್ತವೆ. ಗಾಣದ ಎಣ್ಣೆ, ಸಿರಿಧಾನ್ಯ, ದೇಸಿ ಆಹಾರಗಳನ್ನು ಉಪಯೋಗಿಸುವುದರಿಂದ ಆರೋಗ್ಯವಾಗಿ ಇರಬಹುದು ಎಂದು ತಿಳಿಸಿದರು.
ಶಿಬಿರದಲ್ಲಿ ಪೌರಕಾರ್ಮಿಕರು ಹಾಗೂ ಕುಟುಂಬಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಮಾತನಾಡಿ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು. ಪೌರಕಾರ್ಮಿಕರ ಆರೋಗ್ಯವೂ ಬಹಳ ಮುಖ್ಯ. ಪ್ರತಿ ಆರು ತಿಂಗಳಿಗೊಮ್ಮೆ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಪಿ. ಸುರೇಶ್, ಸಮತಾ ಟ್ರಸ್ಟ್ ಅಧ್ಯಕ್ಷ ಎಂ.ಬಿ.ರವೀಂದ್ರ, ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಶಿವರಾಜು, ಮುಖಂಡರಾದ ಭೀಮನಹಳ್ಳಿ ಸೋಮೇಶ್, ಕುಮಾರಸ್ವಾಮಿ, ಮರಲಿಂಗಯ್ಯ, ಸ್ವರಾಲಯ ಮ್ಯೂಜಿಕಲ್ ಟ್ರಸ್ಟ್ ಅಧ್ಯಕ್ಷ ಸಿದ್ದರಾಜು, ನಂಬಿಕೆ ಪ್ರಾಡೆಕ್ಟ್ ನ ಮ್ಯಾನೇಜರ್ ಕೃಷ್ಣಯ್ಯ ಸೇರಿದಂತೆ ಅನೇಕರು ಇದ್ದರು.