ತಾಲೂಕಿನ ಬೋಳನಹಳ್ಳಯ ಮಾತೆ ಮಾಳಿಗೇಶ್ವರಿ ಅಮ್ಮನವರ ದೇವಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಾವಡಗೆರೆಯ ಶ್ರೀ ನಟರಾಜ ಸ್ವಾಮೀಜಿ, ದೇವಾಲಯದ ಟ್ರಸ್ಟಿ ಬಿ.ಎಸ್.ನಾಗರಾಜ್, ವಿ.ಎನ್.ದಾಸ್, ಕಾರ್ಯದರ್ಶಿ ಯೋಗಾನಂದಕುಮಾರ್, ಶಿವಮಾದು, ರಾಮಯ್ಯ ಮತ್ತಿತರರಿದ್ದರು. 
ಮೈಸೂರು

ಸಂಪಾದನೆಯ ಒಂದಂಶ ಧರ್ಮಕಾರ್ಯಕ್ಕೆ ಬಳಸಿ

ಪ್ರಮುಖ ಮುಖ್ಯಾಂಶಗಳು

  • earnings for charity
ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಬೋಳನಹಳ್ಳಿಯ ಶ್ರೀಮಾತೆ ಮಾಳಿಗೇಶ್ವರಿ ದೇವಾಲಯದ 12ನೇ ವಾರ್ಷಿಕೋತ್ಸವದ ಹಾಗೂ ಸಪ್ತಪದಿ ಮಂದಿರದ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಗ್ರಾಮಸ್ಥರು ಮತ್ತು ದೇವಿಯ ಭಕ್ತರು ಭಾಗವಹಿಸಿ ಧನ್ಯತೆ ಅನುಭವಿಸಿದರು.
ಅರ್ಚಕ ರವಿಕುಮಾರ್ ನೇತೃತ್ವದಲ್ಲಿ ಭಾನುವಾರ ವಿವಿಧ ಅಭಿಷೇಕ, ಹೋಮ-ಹವನ ನಡೆಸಿ, ದೇವರಿಗೆ ಬಗೆಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಪ್ರಸಾದ ವಿನಿಯೋಗ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಅಲಂಕೃತ ಪಲ್ಲಕ್ಕಿಯಲ್ಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ಮನೆ ಬಳಿಗೆ ಬಂದ ವೇಳೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆದರು.
ನಂತರ ಆಯೋಜನೆಗೊಂಡಿದ್ದ ಧಾರ್ಮಿಕ ಸಭೆಯಲ್ಲಿ ಗಾವಡಗೆರೆ ಗುರುಲಿಂಗಜಂಗಮ ದೇವರ ಮಠದ ಶ್ರೀನಟರಾಜ ಸ್ವಾಮೀಜಿ ಮಾತನಾಡಿ, ಮನುಷ್ಯನಾದವನು ಸಂಪಾದಿಸಿದ ಹಣದಲ್ಲಿ ಕಿಂಚಿತ್ತಾದರೂ ಧರ್ಮದ ಕಾರ್ಯಕ್ಕೆ ಬಳಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಅದುವೇ ಸಮಾಜ ಸೇವಾ ಕಾರ್ಯ. ಗ್ರಾಮದ ಎಲ್ಲ ಸಮುದಾಯಗಳು ಸೇರಿ ಮಂದಿರದಲ್ಲಿ ತಿಂಗಳಿಗೊಂದು ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಹಬಾಳ್ವೆ ನಡೆಸಬೇಕು ಎಂದರು.
ವಕೀಲ ಬಿ.ಎಸ್.ನಾಗರಾಜ್ ಅವರು ತಮ್ಮ ಹುಟ್ಟೂರಿನ ಋಣ ತೀರಿಸುವ ಸಲುವಾಗಿ ಗ್ರಾಮದಲ್ಲಿ ಟ್ರಸ್ಟ್ ರಚಿಸಿಕೊಂಡು ಮಾತೆ ಮಾಳಿಗೇಶ್ವರಿ ದೇವಾಲಯ ನಿರ್ಮಿಸಿ ಗ್ರಾಮಸ್ಥರಿಗೆ ದೇವರ ಸ್ಮರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಪಕ್ಕದಲ್ಲೇ ಸಪ್ತಪದಿ ಮಂದಿರ ನಿರ್ಮಿಸಿ ಗ್ರಾಮಸ್ಥರಿಗೆ ನೆರವಾಗಿರುವುದು ಶ್ಲಾಘನೀಯ ಎಂದರು.
ಟ್ರಸ್ಟ್ ಅಧ್ಯಕ್ಷ ವಕೀಲ ಬಿ.ಎಸ್.ನಾಗರಾಜ್ ಮಾತನಾಡಿ, ಮಲೆ ಮಹದೇಶ್ವರ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಘ ಆರಂಭಿಸಿ ಸೊಸೈಟಿ ಆರಂಭಿಸಲಾಗಿದೆ. ರೈತ ಬಂಧು ವಿವಿಧೋದ್ದೇಶ ಸಹಕಾರ ಸಂಘ ರಚಿಸಿ ಕೃಷಿಕರಿಗೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಮಾದು, ಹುಣಸೂರು ಹನುಮಂತ್ಯುತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಕೀಲ ಯೋಗಾನಂದ ಕುಮಾರ್, ನಿವೃತ್ತ ಶಿಕ್ಷಕ ರಾಮಯ್ಯ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.