ಹುಣಸೂರು ರಸ್ತೆಯ ಜಿಲ್ಲಾಧಿಕಾರಿ ನಿವಾಸದ ಎದುರು ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಮಹಾನಗರಪಾಲಿಕೆಯ ಅಭಯ್ ತಂಡದ ಸಿಬ್ಬಂದಿ ತೆರವುಗೊಳಿಸಿದರು. 
ಮೈಸೂರು

ಮೈಸೂರಿನ ಕಲಾಮಂದಿರದ ಬಳಿ ಧರೆಗುರುಳಿದ ಮರ: ಸಂಚಾರ ಅಸ್ತವ್ಯಸ್ತ

ಪ್ರಮುಖ ಮುಖ್ಯಾಂಶಗಳು

  • ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ಸ್ಥಗಿತ
  • ಮರದ ಕೊಂಬೆಗಳು ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ
  • ಕಲಾಮಂದಿರ ಜಂಕ್ಷನ್ ಮತ್ತು ವಾಲ್ಮೀಕಿ ಜಂಕ್ಷನ್ ಬಳಿ ಬ್ಯಾರಿಕೇಡ್ ಹಾಕಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್
  • ಮಹಾನಗರಪಾಲಿಕೆ ಸಿಬ್ಬಂದಿಯಿಂದ ತೆರವು
ಮೈಸೂರು: ನಗರದ ಹುಣಸೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ನಿವಾಸದ ಎದುರು ಬೃಹತ್ ಮರ ಧರೆಗುರಳಿದ್ದು, ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಬಿರುಗಾಳಿ ಸಹಿತ ಮಳೆ ಆರಂಭವಾದಾಗ ಬೃಹತ್ ಮರ ಏಕಾಏಕಿ ಧರೆಗುರುಳಿದೆ. ರಸ್ತೆ ಮಧ್ಯಭಾಗದಲ್ಲೇ ಮರದ ಕೊಂಬೆಗಳು ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
 ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂಚಾರ ವ್ಯವಸ್ಥೆ ನಿಯಂತ್ರಿಸಿದರು. ಕಲಾಮಂದಿರ ಜಂಕ್ಷನ್ ಮತ್ತು ವಾಲ್ಮೀಕಿ ಜಂಕ್ಷನ್ ಬಳಿ ಬ್ಯಾರಿಕೇಡ್ ಹಾಕಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದರು. 
ಬದಲಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಹಾನಗರಪಾಲಿಕೆ ಅಭಯ್ ನೇತೃತ್ವದ ತಂಡ ಮರವನ್ನು ತೆರವುಗೊಳಿಸಿದರು. ಬಳಿಕ ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ ಕಲ್ಪಿಸಿಕೊಡಲಾಯಿತು.
ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ. ಆದರೆ, ಕೃಷ್ಣರಾಜ, ನರಸಿಂಹರಾಜ ಸೇರಿದಂತೆ ನಗರದ ಇನ್ನಿತರ ಭಾಗದಲ್ಲಿ ಮಳೆಯಾಗಿಲ್ಲ.