ತಿ.ನರಸೀಪುರ ತಾಲೂಕು ಮುಡುಕುತೊರೆ ತೋಪಿನ ಉಪ್ಪಾರರ ಮಂಟಪದಲ್ಲಿ ನಡೆದ ಸಭೆಯಲ್ಲಿ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಹದೇವ ಸ್ವಾಮೀಜಿ, ಆನಂದ್, ನಂಜುಂಡಶೆಟ್ಟಿ, ಸಣ್ಣಶೆಟ್ಟಿ, ರಾಜು, ಸಿದ್ದರಾಜು, ಸಿದ್ದಶೆಟ್ಟಿ, ಸೋಮಣ್ಣ ಉಪ್ಪಾರ್, ಜಯಶಂಕರ ಮೂರ್ತಿ, ಚಿಕ್ಕತಾಂಡಶೆಟ್ಟಿ, ಆರ್.ಮಾದೇಶ್ ಇದ್ದರು. 
ಮೈಸೂರು

ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ

ತಿ.ನರಸೀಪುರ: ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರೋತ್ಸವದ ಧಾರ್ಮಿಕ ಕೇಂದ್ರ ಬಿಂದುವಾಗಿರುವ ಉಪ್ಪಾರರ ಮಂಟಪವನ್ನು ಮೂಲ ಸ್ವರೂಪದಲ್ಲೇ ಸಮುದಾಯದ ದೇಣಿಗೆ ಹಣದಿಂದ ಜೀರ್ಣೋದ್ಧಾರಗೊಳಿಸಿ. ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ತಲಕಾಡು ಹೋಬಳಿ ಮುಡುಕುತೊರೆ ತೋಪಿನಲ್ಲಿರುವ ಉಪ್ಪಾರ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳ ಉಪ್ಪಾರ ಸಮುದಾಯದ ಮುಖಂಡರು ಹಾಗೂ ಗಡಿ ಯಜಮಾನರುಗಳ ಸಭೆಯಲ್ಲಿ ಮಾತನಾಡಿದ ಅವರು, ಶಿಥಿಲಗೊಂಡಿರುವ ಹಳೇ ಮಂಟಪವನ್ನು ನನ್ನ ವೈಯಕ್ತಿಕ ನೆರವು ಸೇರಿದಂತೆ ಸಮುದಾಯದ ದೇಣಿಗೆ ಹಣದಲ್ಲಿ ಮೂಲ ವಿನ್ಯಾಸದಂತೆ ಕಲ್ಲಿನಲ್ಲಿ ನವೀಕೃತ ಹೊಸ ಮಂಟಪ ನಿರ್ಮಾಣ ಮಾಡಲಾಗುವುದು. ಹಳೆಯದಾದ ರಥಗಳು ಕೂಡ ಸಂಪೂರ್ಣವಾಗಿ ಶಿಥಿಲಗೊಂಡಿರುವುದರಿಂದ ಎರಡು ರಥಗಳನ್ನು ಹೊಸದಾಗಿ ನಿರ್ಮಾಣ ಮಾಡುವ ಆಲೋಚನೆಯೂ ಇದೆ ಎಂದರು.
ಮೂರ‌್ನಾಲ್ಕು ಜಿಲ್ಲೆಗಳ ಸಮುದಾಯದ ಗಡಿ ಯಜಮಾನರು ಹಾಗೂ ಗ್ರಾಮಸ್ಥರು ಮುಡುಕುತೊರೆ ಜಾತ್ರೋತ್ಸವದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಸಮುದಾಯ ಭವನದ ಅಗತ್ಯವಿದೆ. ಈ ಬಗ್ಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿ ನೆರವು ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇನೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಉಪ್ಪಾರರ ಅಭಿವೃದ್ಧಿಗೂ ಆದ್ಯತೆ ನೀಡುವಂತೆ ಕೋರುತ್ತೇನೆ ಎಂದು ತಿಳಿಸಿದರು.
ಅಯ್ಯನವರಹುಂಡಿ ಸರಗೂರು ಮಠದ ಶ್ರೀ ಮಹದೇವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಚಾಮರಾಜನಗರ, ಮಳವಳ್ಳಿ, ಕೊಳ್ಳೇಗಾಲ, ಹನೂರು, ತಿ.ನರಸೀಪುರ, ಯಳಂದೂರು, ಮೈಸೂರು, ಚನ್ನಪಟ್ಟಣ ತಾಲೂಕು ಗಡಿ ಕಟ್ಟೆಯ ಮುಖಂಡರು ಹಾಗೂ ಸುತ್ತಲ ಗ್ರಾಮಗಳ ಮುಖಂಡರ ಸಭೆಯಲ್ಲಿ ರಾಜ್ಯ ಸರ್ಕಾರ ನಡೆಸಿರುವ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಅಧಿವೇಶನದಲ್ಲಿಟ್ಟು ಚರ್ಚಿಸಿ ಪ.ಪಂಗಡ ಮೀಸಲಾತಿ ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಮುಖಂಡರಾದ ಆನಂದ್, ನಂಜುಂಡಶೆಟ್ಟಿ, ಸಣ್ಣಶೆಟ್ಟಿ, ರಾಜು, ಸಿದ್ದರಾಜು, ಸಿದ್ದಶೆಟ್ಟಿ, ಸೋಮಣ್ಣ ಉಪ್ಪಾರ್, ಜಯಶಂಕರ ಮೂರ್ತಿ, ಶಿವಮಲ್ಲು, ಚಿಕ್ಕತಾಂಡಶೆಟ್ಟಿ, ಆರ್.ಮಾದೇಶ್, ಜಿಪಂ ಮಾಜಿ ಅಧ್ಯಕ್ಷ ಕಿನಕಳ್ಳಿ ಸಿದ್ದರಾಜು, ಮಹದೇವಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಶಾಂತರಾಜು, ನಟರಾಜ್ ಉಪ್ಪಾರ್, ಎಂ.ಸೋಮಣ್ಣ ಇದ್ದರು.