ನಾಗಮಂಗಲ ತಾಲೂಕಿನ ಮಣಿಯೂರು ಗ್ರಾಮದ ಮಧ್ಯದಲ್ಲಿ ಪತ್ತೆಯಾಗಿರುವ ಅಪ್ರಕಟಿತ ತುರುಗೋಳ್ ವೀರಗಲ್ಲ. 
ಮೈಸೂರು

ಅಪ್ರಕಟಿತ ತುರುಗೋಳ್ ವೀರಗಲ್ಲು ಸಂಶೋಧನೆ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಮಣಿಯೂರಿನಲ್ಲಿ ಪತ್ತೆ
  • 2ನೇ ಶತಮಾನಕ್ಕೆ ಸೇರಿದ ಅಪ್ರಕಟಿತ ಶಾಸನ
 ಮೈಸೂರು: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ.ದೂರದಲ್ಲಿರುವ ಮಣಿಯೂರು ಗ್ರಾಮದ ಮಧ್ಯದಲ್ಲಿ 12ನೇ ಶತಮಾನಕ್ಕೆ ಸೇರಿದ ಅಪ್ರಕಟಿತ ತುರುಗೋಳ್ ವೀರಗಲ್ಲನ್ನು ಸಂಶೋಧಿಸಲಾಗಿದೆ.
 ಈ ಶಾಸನಸ್ಥ ವೀರಗಲ್ಲು ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲಕ್ಕೆ ಸೇರಿದ್ದು, ಸೋಪುಗಲ್ಲಿನಲ್ಲಿ ಕೆತ್ತಲ್ಪಟ್ಟಿದೆ. ಇದು 4.5 ಅಡಿ ಎತ್ತರವಿದ್ದು, ಮೂರು ಪಟ್ಟಿಕೆಗಳಲ್ಲಿ ಕನ್ನಡ ಭಾಷೆ ಮತ್ತು ಲಿಪಿಗಳನ್ನು ಒಳಗೊಂಡ ಶಾಸನವಾಗಿದ್ದು, ಮೂರು ಪಟ್ಟಿಕೆಗಳಲ್ಲಿ ಉಬ್ಬುಶಿಲ್ಪಗಳನ್ನೂ ಒಳಗೊಂಡಿದೆ. 
ಇದು 12ನೇ ಶತಮಾನದಲ್ಲಿ ಗೋವುಗಳ ರಕ್ಷಣೆಗಾಗಿ ಹೋರಾಡಿ ಮಡಿದ ವೀರನ ಸಾಹಸ ಮತ್ತು ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಶಿಲ್ಪಿಸಿದ ಸ್ಮಾರಕ ಶಿಲೆಯಾಗಿದೆ.
ಸ್ಥಳೀಯರಾದ ಎಚ್.ಎಲ್.ಉಮೇಶ್ ಅವರು ನೀಡಿದ ಮಾಹಿತಿ ಮೇರೆಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಪುರಾತತ್ವ ಸಂಶೋಧಕ ಡಾ.ಸಿ.ಎ.ಶಶಿಧರ ಈ ಗ್ರಾಮದ ರಾಮಕೃಷ್ಣೇಗೌಡ ಅವರ ತೋಟಕ್ಕೆ ಸ್ಥಳಕ್ಕೆ ಭೇಟಿ ನೀಡಿ, ಕ್ಷೇತ್ರ ಕಾರ್ಯಾನ್ವೇಷಣೆ ಕೈಗೊಂಡು ಈ ವೀರಗಲ್ಲನ್ನು ಸಂಶೋಧಿಸಿದ್ದಾರೆ.
 ನಂತರ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರ ಅನುಮತಿ ಪಡೆದು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ.ತಳವಾರ್ ನೇತೃತ್ವದಲ್ಲಿ ಡಾ.ಶಶಿಧರ, ನೃತ್ಯ ಸಂಶೋಧಕರಾದ ಸಂತೋಷಿ ಸುಬ್ರಹ್ಮಣ್ಯ, ಗ್ರಂಥಾಲಯ ಸಹಾಯಕ ವಿ.ನಾಗೇಂದ್ರ ಹಾಗೂ ವಿಡಿಯೋಗ್ರಾಫರ್ ರಮೇಶ್ ಪಟೇಲ್ ಅವರನ್ನು ಒಳಗೊಂಡ ತಂಡವು ಸ್ಥಳೀಯರ ಸಹಕಾರ ಪಡೆದು ವೀರಗಲ್ಲು ಶಿಲ್ಪವು ಪೂರ್ಣಪ್ರಮಾಣದಲ್ಲಿ ಕಾಣುವಂತೆ ಅಗೆದು, ಹೊರ ತೆಗೆದು ಅದರ ಪಡಿಯಚ್ಚು ತೆಗೆಯಲಾಯಿತು.