ರೋಟರಿ ಕ್ಲಬ್ ಆಫ್ ಸೇವಾ ಮೈಸೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಎನ್. ಪ್ರಕಾಶ್‌ಕಾರಂತ್, ಡಾ.ಎಂ.ಪಿ.ವರ್ಷ, ರಾಜೇಂದ್ರ ಹುಬ್ಬಳ್ಳಿ, ಎಂ.ಪಿ.ಗೋಪಾಲಕೃಷ್ಣ, ಪಿ.ಗೌರಿಶಂಕರಸ್ವಾಮಿ ಇತರರು ಇದ್ದರು. 
ಮೈಸೂರು

ರೋಟರಿ ಸೇವಾ ಕ್ಲಬ್‌ನಿಂದ ಅನುಪಮ ಕಾರ್ಯ:ಪ್ರಕಾಶ್ ಕಾರಂತ್ ಅಭಿಪ್ರಾಯ

ಪ್ರಮುಖ ಮುಖ್ಯಾಂಶಗಳು

  • ಅತ್ಯುತ್ತಮ ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಹೆಸರು ಮಾಡಿದೆ
  • ಸುಮಾರು 1.20 ಕೋಟಿ ರೂ.ಗೆ ಹೆಚ್ಚಿನ ಮೊತ್ತದ ಸೇವಾ ಕಾರ್ಯಗಳನ್ನು ಅನುಷ್ಠಾನ ಮಾಡಲಾಗಿದೆ
ಮೈಸೂರು:ರೋಟರಿ ಕ್ಲಬ್ ಆಫ್ ಸೇವಾ ಮೈಸೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು.
ಕ್ಲಬ್ನ 2026-27ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಂ.ಪಿ.ವರ್ಷ ಅವರಿಗೆ ಹಿಂದಿನ ಜಿಲ್ಲಾ ಪ್ರಾಂತಪಾಲ ಮಂಗಳೂರಿನ ಎನ್. ಪ್ರಕಾಶ್ ಕಾರಂತ್ ಪದವಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು ಕೇವಲ 10 ತಿಂಗಳ ಹಿಂದೆ ಸ್ಥಾಪಿತವಾದ ರೋಟರಿ ಸೇವಾ ಕ್ಲಬ್ 10 ವರ್ಷಗಳಿಗೂ ಮಾಡಲಾರದಂತಹ ಅತ್ಯುತ್ತಮ ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಹೆಸರು ಮಾಡಿದೆ. ಇದಕ್ಕೆ ಸೇವಾ ಕ್ಲಬ್ನ ಅಧ್ಯಕ್ಷರ ನಾಯಕತ್ವ ಹಾಗೂ ಎಲ್ಲ ಪದಾಧಿಕಾರಿಗಳ ನಿಸ್ವಾರ್ಥ ಸೇವೆ ಹಾಗೂ ಪಾಲ್ಗೊಳ್ಳುವಿಕೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧಿಕಾರ ಸ್ವೀಕರಿಸಿದ ಡಾ.ಎಂ.ಪಿ. ವರ್ಷ ಮಾತನಾಡಿ, ಕ್ಲಬ್ನಿಂದ ಅನುಷ್ಠಾನಗೊಳಿಸಿದ ಕೆರೆ ಪುನರುಜ್ಜೀವನ, ಶಾಲೆಗಳಲ್ಲಿ ಮಳೆನೀರು ಕೊಯ್ಲು ಘಟಕ ನಿರ್ಮಾಣ, ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ದೇಶದ ಪ್ರಖ್ಯಾತ ಸಂಸ್ಥೆ ಇಸ್ರೋ ಗೆ ಕರೆದೊಯ್ಯುವುದು, ಶ್ರೀಲಂಕಾ ದೇಶದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ, ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ ದಕ್ಷಿಣ ಏಷ್ಯಾವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ಸಂಗತಿ. ಸುಮಾರು 1.20 ಕೋಟಿ ರೂ.ಗೆ ಹೆಚ್ಚಿನ ಮೊತ್ತದ ಸೇವಾ ಕಾರ್ಯಗಳನ್ನು ಅನುಷ್ಠಾನ ಮಾಡಲಾಗಿದೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ವಿತರಿಸಲಾಯಿತಲ್ಲದೆ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ 10 ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚ ಭರಿಸುವ ಯೋಜನೆಯನ್ನು ಇದೇ ವೇಳೆ ಪ್ರಕಟಿಸಲಾಯಿತು.
ವಲಯ ಏಳರ ಸಹಾಯಕ ಪ್ರಾಂತಪಾಲ ರಾಜೇಂದ್ರ ಹುಬ್ಬಳ್ಳಿ, ಎಂ.ಪಿ.ಗೋಪಾಲಕೃಷ್ಣ, ಕ್ಲಬ್‌ನ ಕಾರ್ಯದರ್ಶಿ ಪಿ.ಗೌರಿಶಂಕರಸ್ವಾಮಿ, ರೋಟರಿ ಜಿಲ್ಲೆ 3181 ರ ಹಿಂದಿನ ಪ್ರಾಂತಪಾಲ ಪಿ.ಕೆ. ರಾಮಕೃಷ್ಣ, ಸಹಾಯಕ ಪ್ರಾಂತಪಾಲ ಹರೀಶ್, ವಿವಿಧ ರೋಟರಿ ಕ್ಲಬ್ ಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಇದ್ದರು.