ಮೈಸೂರು ನಗರದ ಖಾಸಗಿ ರೆಸಾರ್ಟ್‌ನಲ್ಲಿ ಮಂಗಳವಾರ ದೇಶದ ಎಲ್ಲ ವಿಧಾನಸಭೆಗಳ ಕಾರ್ಯವಿಧಾನ ಮತ್ತು ನಡಾವಳಿಯಲ್ಲಿ ಏಕರೂಪತೆ ತರಲು ರಚಿಸಲಾಗಿರುವ ಸಮಿತಿಯ ಸಭೆಯನ್ನು ಸಮಿತಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶ ವಿಧಾನಸಭೆಯ ಸಭಾಧ್ಯಕ್ಷ ಸತೀಶ್ ಮಹಾನ ಉದ್ಘಾಟಿಸಿದರು. ಯು.ಟಿ.ಖಾದರ್, ಶ್ಯಾರಿಗ್ಯಾನ್ ಲಾಂಗ್ಕುಮೇರ್, ಕುಲ್ದೀಪ್ ಸಿಂಗ್ ಪತಾನೀಯ, ವಿಜೇಂದರ್ ಗುಪ್ತ ಇದ್ದರು.
ಮೈಸೂರು: ದೇಶದ ಎಲ್ಲ ವಿಧಾನಸಭೆಗಳ ಕಾರ್ಯವಿಧಾನ ಮತ್ತು ನಡಾವಳಿಯಲ್ಲಿ ಏಕರೂಪತೆ ತರಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ರಚಿಸ ಲಾಗಿರುವ ಸಮಿತಿಯು ಆರು ತಿಂಗಳ ಒಳಗೆ ಲೋಕಸಭೆಗೆ ಅಂತಿಮ ವರದಿ ಸಲ್ಲಿಸಲಿದೆ ಎಂದು ಸಮಿತಿ ಅಧ್ಯಕ್ಷರು ಹಾಗೂ ಉತ್ತರ ಪ್ರದೇಶ ವಿಧಾನಸಭೆಯ ಸಭಾಧ್ಯಕ್ಷ ಸತೀಶ್ ಮಹಾನ ಹೇಳಿದರು.
ಲೋಕಸಭೆಯ ಸಭಾಧ್ಯಕ್ಷ ಓಂಪ್ರಕಾಶ್ ಬಿರ್ಲಾ ಅವರು ಈ ಸಮಿತಿಯನ್ನು ರಚಿಸಿದ್ದು, ಸಮಿತಿಯಲ್ಲಿ ಉತ್ತರ ಪ್ರದೇಶ, ಕರ್ನಾಟಕ, ನಾಗಲ್ಯಾಂಡ್, ಹಿಮಾಚಲ್ ಪ್ರದೇಶ, ಮಹಾರಾಷ್ಟ್ರ ಹಾಗೂ ದೆಹಲಿಯ ವಿಧಾನಸಭಾ ಅಧ್ಯಕ್ಷರು ಇದ್ದಾರೆ. ಸಮಿತಿಯ ಮೊದಲ ಸಭೆ ಇಂದು ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಸಭೆಯನ್ನು ದೆಹಲಿಯಲ್ಲಿ ನಡೆಸಿ ನಂತರ ಅಂತಿಮ ವರದಿಯನ್ನು ಲೋಕಸಭೆಯ ಸಭಾಧ್ಯಕ್ಷ ಓಂಪ್ರಕಾಶ್ ಬಿರ್ಲಾ ಅವರಿಗೆ ಸಲ್ಲಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಸಭೆಯ ನೀತಿ ನಿಯಮಗಳನ್ನು 40 ವರ್ಷಗಳ ಹಿಂದೆ ರೂಪಿಸಲಾಗಿದೆ. ಈ ಹಿಂದೆ 30 ವರ್ಷಗಳಿಗೆ ತಲೆಮಾರುಗಳಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣುತ್ತಿದ್ದೆವು. ಆದರೆ, ತಂತ್ರಜ್ಞಾನದ ಬೆಳವಣಿಗೆಯಿಂದ ಇದೀಗ 5 ವರ್ಷಗಳಿಗೆ ತಲೆಮಾರುಗಳಲ್ಲಿ ಬದಲಾ ವಣೆಗ ಳನ್ನು ಕಾಣುತ್ತಿದ್ದೇವೆ. ಹಾಗಾಗಿ ಇಂದಿನ ಪೀಳಿಗೆಗೆ ಪೂರಕವಾದ ನಿಯಮಾವಳಿಗಳ ಅವಶ್ಯಕತೆ ಇದೆ. ಅಂತಿಮವಾಗಿ ಇದರಿಂದ ಜನರಿಗೆ ಲಾಭ ದೊರೆಯಬೇಕಾಗಿದೆ ಹೇಳಿದರು.
ಸಮಿತಿಯು ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳ ಕಾರ್ಯವಿಧಾನ ಮತ್ತು ನಡಾವಳಿಯನ್ನು ಅವಲೋಕ ನಡೆಸಿ ಎಲ್ಲ ರಾಜ್ಯಗಳ ಅಭಿಪ್ರಾಯವನ್ನು ಕ್ರೋಢೀಕರಿಸಿ ಅಂತಿಮ ವರದಿ ಸಿದ್ಧಪಡಿಸಲಿದೆ. ಯಾವೆಲ್ಲ ರೀತಿಯ ಬದಲಾವಣೆಗಳು ಆಗಬೇಕು, ಯಾವೆಲ್ಲ ಹೊಸ ಅಂಶಗಳನ್ನು ಸೇರ್ಪಡೆಗೊಳಿಸಬೇಕು ಎಂಬ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದರು.
ವಿಧಾನಸಭೆ ಕಾರ್ಯಕಲಾಪ ಕನಿಷ್ಠ 90 ದಿನಗಳ ಕಾಲ ನಡೆಯಬೇಕು. ಆದರೆ, ಹಲವು ವಿಧಾನಸಭೆಗಳಲ್ಲಿ ಇಷ್ಟೊಂದು ದಿನಗಳ ಕಾಲ ವಿವಿಧ ಕಾರಣಗಳಿಂದ ಸದನ ನಡೆಯುವುದಿಲ್ಲ. ಹೆಚ್ಚಿನ ದಿನಗಳ ಕಾಲ ಕಲಾಪ ನಡೆಯುವಂತೆ ಮಾಡಬೇಕಾಗಿದೆ. ಈ ವಿಚಾರದ ಕುರಿತು ಸಮಿತಿಯು ಚರ್ಚೆ ನಡೆಸಿದೆ. ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಂದರ್ಭದಲ್ಲಿ ಶಾಸಕರು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮಸೂದೆಯ ಕುರಿತು ಮೊದಲೇ ಓದಿಕೊಂಡು ತಮ್ಮ ಅಭಿಪ್ರಾಯಮಂಡಿಸಬೇಕು. ವಿಧಾನಸಭೆಯಲ್ಲಿ ಜನರಿಗೆ ಉಪಯುಕ್ತವಾದ ಉತ್ತಮವಾದ ಚರ್ಚೆಗಳು ಹೆಚ್ಚಾಗಿ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಿತಿ ಸದಸ್ಯ ಹಾಗೂ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಬರುವ ಮುನ್ನವೇ ಮೈಸೂರು ಮಹಾರಾಜರು ಪ್ರಜಾಪ್ರಭುತ್ವದ ಮಾದರಿಯ ಆಡಳಿತ ನಡೆಸಿದರು. ಮೈಸೂರಿನಲ್ಲಿ ಪ್ರಥಮ ಬಾರಿಗೆ ಮಹಾರಾಜರು ಪ್ರಜಾಪ್ರತಿನಿಧಿ ಸಭೆ ನಡೆಸಿದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಗಳ ಕಾರ್ಯವಿಧಾನ ಮತ್ತು ನಡಾವಳಿಯಲ್ಲಿ ಏಕರೂಪತೆ ತರಲು ರಚಿಸಿರುವ ಸಮಿತಿಯ ಮೊದಲ ಸಭೆಯನ್ನು ಮೈಸೂರಿನಲ್ಲಿ ನಡೆಸಲಾಗಿದೆ ಎಂದು ಹೇಳಿದರು.
ವಿವಿಧ ರಾಜ್ಯಗಳ ವಿಧಾನಸಭೆಯಲ್ಲಿ ಭಿನ್ನವಾದ ನಿಯಮಗಳು, ಕಾನೂನು ಹಾಗೂ ಸಂಪ್ರದಾಯಗಳು ಇವೆ. ಕೆಲವೊಂದು ರಾಜ್ಯಗಳಲ್ಲಿ ಉತ್ತಮವಾದ ನಿಯಮಗಳು ಇರುತ್ತವೆ. ಆ ಉತ್ತಮವಾದ ಅಂಶವನ್ನು ಎಲ್ಲ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಲು ಸಮಿತಿ ಶಿಫಾರಸು ಮಾಡಲಾಗುವುದು. ನಿಮಯಮಗಳನ್ನು ಸಂವಿಧಾನ ಪ್ರಕಾರವೇ ಬದಲಾವಣೆ ಮಾಡಲಾಗುವುದು. ಈ ಬದಲಾವಣೆಗಳಿಂದ ಒಕ್ಕೂಟ ವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನಸಭೆ ಕಲಾಪಗಳು ಎಷ್ಟು ದಿನಗಳ ಕಾಲ ನಡೆಯಬೇಕು, ಪ್ರಸ್ತುತ ಎಷ್ಟು ದಿನಗಳ ಕಾಲ ನಡೆಯುತ್ತಿದೆ ಎಂದು ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ನಿಗದಿ ಪಡಿಸಿದಷ್ಟು ದಿನಗಳ ಕಾಲ ಕಲಾಪವನ್ನು ಕಡ್ಡಾಯವಾಗಿ ನಡೆಸುವ ನಿಟ್ಟಿನಲ್ಲಿ ಯಾವ ರೀತಿಯ ಕಾನೂನು ರೂಪಿಸಬೇಕು ಎಂದು ಕುರಿತು ಚರ್ಚಿಸಿದ್ದೇವೆ. ಅದೇ ರೀತಿ ಪ್ರಶ್ನೋತ್ತರ ಅವಧಿ ಎಷ್ಟು ಇರಬೇಕು, ಖೋರಂ ಅನ್ನು ಯಾವ ರೀತಿ ನಿಭಾಯಿಸಬೇಕು ಎಂಬ ಕುರಿತು ಚರ್ಚಿಸಿದ್ದೇವೆ ಎಂದು ತಿಳಿಸಿದರು.
ಕೆಲವು ರಾಜ್ಯಗಳಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಯು.ಟಿ. ಖಾದರ್, ಈ ವಿಚಾರ ನಮ್ಮ ಸಮಿತಿಯ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಈ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ನಾಗಾಲ್ಯಾಂಡ್ ವಿಧಾನಸಭೆಯ ಸಭಾಧ್ಯಕ್ಷ ಶ್ಯಾರಿಗ್ಯಾನ್ ಲಾಂಗ್ಕುಮೇರ್, ಹಿಮಾಚಲ ಪ್ರದೇಶದ ವಿಧಾನಸಭೆಯ ಸಭಾಧ್ಯಕ್ಷ ಕುಲ್ದೀಪ್ ಸಿಂಗ್ ಪತಾನೀಯ ಹಾಗೂ ದೆಹಲಿ ವಿಧಾನಸಭೆಯ ಸಭಾಧ್ಯಕ್ಷ ವಿಜೇಂದರ್ ಗುಪ್ತ ಇದ್ದರು.