ಆರ್‌ಎಸ್‌ಎಸ್ ಸರಸಂಘಸಂಚಾಲಕ ಮೋಹನ್ ಭಾಗವತ್ 
ಮೈಸೂರು

ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ : ಮೋಹನ್ ಭಾಗವತ್ ಆಶಯ

ಮೈಸೂರು: ಏಕರೂಪ ನಾಗರಿಕ ಸಂಹಿತೆಯು ಉತ್ತರಾಖಂಡದಲ್ಲಿ ಅನುಷ್ಠಾನಗೊಂಡಿದ್ದು, ಬಹುಶಃ ಮುಂದಿನ ದಿನಗಳಲ್ಲಿ ದೇಶದ ಉಳಿದ ರಾಜ್ಯಗಳಲ್ಲೂ ಅನುಷ್ಠಾನಗೊಳ್ಳಬಹುದು ಎಂದು ಆರ್‌ಎಸ್‌ಎಸ್ ಸರಸಂಘಸಂಚಾಲಕ ಮೋಹನ್ ಭಾಗವತ್ ಹೇಳಿದರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಮಠದಲ್ಲಿ ಗುರುವಾರ ಜೆಎಸ್‌ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವದ 15ನೇ ವಿಶೇಷ ಉಪನ್ಯಾಸದ ಬಳಿಕ ಆಯೋಜಿಸಿದ್ದ ಪ್ರಶ್ನೋತರದಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಕೆಲವೊಂದು ನಿರ್ಧಾರಗಳು ಅನುಷ್ಠಾನಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ, ನಾವು ತಾಳ್ಮೆಯಿಂದ ಇರಬೇಕಷ್ಟೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಯಾವುದೇ ನಿರ್ಧಾರದ ಹಿಂದೆ ದೇಶದ 142 ಕೋಟಿ ಜನರ ಅಭಿಪ್ರಾಯವೂ ಮುಖ್ಯ. ಹಾಗಾಗಿ ಏಕರೂಪ ನಾಗರಿಕ ಸಂಹಿತೆ ದೇಶಾದ್ಯಂತ ಜಾರಿಯಾಗದೆ ಇರುವ ವಿಚಾರದಲ್ಲಿ ಆತಂಕಿತರಾಗುವ ಅವಶ್ಯಕತೆ ಇಲ್ಲ ಎಂದರು.
ಜಾತಿ ರಾಜಕಾರಣ ಹೆಚ್ಚಾಗಲು ಸಮಾಜವೇ ಕಾರಣ. ನೀವು ಜಾತಿಯ ಮೂಲಕ ಪರಿಚಯ ಮಾಡಿಕೊಂಡರೆ ರಾಜಕಾರಣಿಗಳು ಜಾತಿಯ ಮೂಲಕ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ನಾವು ರಾಜಕಾರಣಿಗಳನ್ನು ದೂರುವ ಬದಲು, ನಾವು ಬದಲಾವಣೆ ಆಗಬೇಕು ಎಂದು ಹೇಳಿದರು.
ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ, ಈ ವಿಚಾರದಲ್ಲಿ ಜನರೇ ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುವ ಪ್ರಬುದ್ಧತೆ ತೋರಬೇಕು ಎಂದು ಹೇಳಿದರು.