ಡಾ.ಸುಧಾಕರ್ ಹೊಸಳ್ಳಿ ರಚನೆಯ ‘ನಾನೂ ಕಾಫಿರ’-ಬಾಬಾ ಸಾಹೇಬರ ಹಿಂದುತ್ವ ಕಥನ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಶ್ರೀ ಸೋಮನಾಥ ಸ್ವಾಮೀಜಿ, ಸಹನಾ ವಿಜಯಕುಮಾರ್, ಮಾ. ವೆಂಕಟರಾಮ್ ಇತರರಿದ್ದರು. 
ಮೈಸೂರು

ಮಾದರಿ ಸಂವಿಧಾನ ನೀಡಿದ ಬಾಬಾಸಾಹೇಬರ ಅರ್ಥ ಮಾಡಿಕೊಳ್ಳಿ

ಅವಿನಾಶ್ ಜೈನಹಳ್ಳಿ
ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ, ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿದ್ದಾರೆ. ಪ್ರತಿಯೊಬ್ಬರು ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಹೇಳಿದರು.
ನಗರದ ಸ್ಕಾೃನ್ ರೇ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸಹಿತಂ ಪ್ರಕಾರ ಹಾಗೂ ಸ್ವರಾಷ್ಟ್ರ ಪ್ರಕಾಶನ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ.ಸುಧಾಕರ್ ಹೊಸಳ್ಳಿ ರಚನೆಯ ‘ನಾನೂ ಕಾಫಿರ’-ಬಾಬಾ ಸಾಹೇಬರ ಹಿಂದುತ್ವ ಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾನತೆಯ ಸಮಾಜ ಕಟ್ಟಲು ಅನುಕೂಲವಾಗುವಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನ ಮಾಡಿ ವಿಶ್ವಕ್ಕೆ ಮಾದರಿಯಾದ ಸಂವಿಧಾನ ಬರೆದರು. ಸಂವಿಧಾನ ರಚನೆಗಾಗಿ ಅವರು ಎಲ್ಲರನ್ನೂ ಅರ್ಥಮಾಡಿಕೊಂಡು, ಎಲ್ಲರನ್ನೂ ತಿಳಿದುಕೊಂಡು ತಮ್ಮ ಇಡೀ ಜೀವನವನ್ನು ರಚನೆಗಾಗಿ ಬಳಸಿದ್ದಾರೆ. ಆದ್ದರಿಂದ ಅವರನ್ನು ಓದಿ ಅರ್ಥಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರೂ, ಎಲ್ಲ ಧರ್ಮದ ಜನರು ಕೂಡ ಹೇಗೆ ಜೀವಿಸಬೇಕು, ಪ್ರತಿಯೊಬ್ಬರಿಗೂ ಏನು ಹೇಳಬೇಕು, ಎಲ್ಲವನ್ನೂ ಕೂಡ ಸರಳವಾಗಿ ರೀತಿಯಲ್ಲಿ ಬೋಧಿಸಿದ್ದಾರೆ. ತನ್ಮೂಲಕ ಸಂವಿಧಾನವನ್ನು ನಮ್ಮ ಕೈಗೆ ತಂದುಕೊಟ್ಟಿದ್ದಾರೆ. ನಾವು ಅದನ್ನು ಅರ್ಥ ಮಾಡಿಕೊಂಡು ಒಟ್ಟಿಗೆ ಕುಟುಂಬದ ಸದಸ್ಯರಂತೆ ಬಾಳಬೇಕಾಗಿದೆ. ಹಾಗೇ ಬಾಳಬೇಕಾದರೆ ಅಂಬೇಡ್ಕರ್ ಅವರು ಕೊಟ್ಟಿರುವಂತಹ ತತ್ವಗಳನ್ನು ನಾವು ಓದಬೇಕು. ಅನುಭವ ಮಾಡಿಕೊಳ್ಳಬೇಕು ಹಾಗೂ ತಿಳಿವಳಿಕೆ ಮೂಡಿಸಿಕೊಳ್ಳಬೇಕು ಎಂದರು.
ಜಗತ್ತಿನಲ್ಲಿ ಇರುವ ಎಲ್ಲ ಧರ್ಮಗಳು ಶಾಂತಿಯನ್ನೇ ಬಯಸುತ್ತವೆ. ಯಾವ ಧರ್ಮವೂ ಕೂಡ ಒಬ್ಬರನ್ನು ಇನ್ನೊಬ್ಬರ ಮೇಲೆ ಆಕ್ರಮಣ ಮಾಡು ಎಂದು ಹೇಳಿಲ್ಲ. ಎಲ್ಲರೂ ಜೀವನದ ಎಲ್ಲ ಸತ್ಯವನ್ನೇ ಹೇಳಿದ್ದಾರೆ. ನಾವು ಅದನ್ನು ಅರ್ಥ ಮಾಡಿಕೊಳ್ಳದೆ ಹೋಗುತ್ತಾ ಇದ್ದೇವೆ. ಹೀಗಾಗಿ ಇವುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಎಲ್ಲವನ್ನೂ ತಿಳಿದಿರುವವರು ಚಿಂತನೆ ಮಾಡಬೇಕು. ಜಾಗೃತಿ ಮೂಡಿಸಬೇಕು. ಸಹಭಾಗಿಗಳಾಗಿ ಸಮರಸ್ಯದಿಂದ ನಡೆಯಬೇಕು ಎಂದು ತಿಳಿಸಿದರು.
ವಿಶ್ವದ ಪೂರ್ವ ಭಾಗದಲ್ಲಿ ಅಸ್ಥಿರತೆ, ಮಧ್ಯ ಪ್ರಾಚ್ಯದಲ್ಲಿ ಇವತ್ತು ಇರುವುದು ಅಸ್ಥಿರತೆ. ಹಾಗೆ, ಪಶ್ಚಿಮ ದೇಶಗಳಲ್ಲಿ ಎಲ್ಲ ಕಡೆ ಅಸ್ಥಿರತೆ. ಇವರೆಲ್ಲವನ್ನೂ ನೋಡಿದರೆ ನಮ್ಮ ಭಾರತದಲ್ಲಿ ಮಾತ್ರ ಶಾಂತವಾಗಿದೆ. ಇವತ್ತು ಆಲೋಚನೆ ಮಾಡುವ, ಚಿಂತನೆ ಮಾಡುವಂತಹ ಕಾಲದಲ್ಲಿ ನಾವು ಇದ್ದು, ಸಮಾಧಾನವಾಗಿ, ಶಾಂತವಾಗಿ ಜೀವನ ನಡೆಸಬೇಕು. ಕವಿಗಳು ಹೇಳಿರುವಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ, ವೇದದಲ್ಲಿ ಹೇಳಿರುವಂತೆ ಈ ಜಗತ್ತಿಗೆ ತುಂಬಾ ಮಧುರವಾಗಿ ಇರಬೇಕು ಎಂದು ತಿಳಿಸಿದರು.
ಪುಸ್ತಕ ಬಿಡುಗಡೆ ಮಾಡಿದ ಸಹನಾ ವಿಜಯಕುಮಾರ್ ಮಾತನಾಡಿ, ಮಹನೀಯರ ಕೃತಿಗಳನ್ನು ಪ್ರಾದೇಶಿಕ ಭಾಷೆಗೆ ಅನುವಾದ ಮಾಡುವಾಗ ಈಗಿನ ಚಳವಳಿಗೆಳಿಗೆ ಅನುಕೂಲ ಮಾಡುವುದು, ಸಂದರ್ಭದ ಅನುಕೂಲಕ್ಕೆ ಉಳಿಸುವುದು ಬಹಳ ಜಾಸ್ತಿ. ಆದ್ದರಿಂದ ಬಾಬಾ ಸಾಹೇಬರ ಕೃತಿಗಳನ್ನು ಈ ತರಹದ ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ ಇದ್ದದ್ದನ್ನು ಇದ್ದಂತೆ ಅನುವಾದ ಮಾಡಬೇಕು. ಏಕೆಂದರೆ ಬುದ್ಧನು ಬಿಕ್ಕುಣಿಯ ಸಂಘವನ್ನು ಆರಂಭಿಸಿದ ಸಂದರ್ಭದಲ್ಲಿ ಈ ಸಂಘವು ಸಾವಿರ ವರ್ಷ ಇರುತ್ತದೆ ಎಂದು ತಿಳಿದುಕೊಂಡಿದ್ದೇ, ಆದರೆ ಐನೂರು ವರ್ಷಕ್ಕೆ ಮಾತ್ರ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಇದನ್ನು ಅನುವಾದ ಮಾಡಿರುವ ಕೃತಿಯಲ್ಲಿ ಬಿಕ್ಕುಣಿ ಸಂಘವನ್ನು ತಗೆದು ಹಾಕಿ, ಐನೂರು ವರ್ಷ ಇರಲಿದೆ ಎನ್ನುವುದನ್ನು ಮಾತ್ರ ಪ್ರಕಟಿಸಲಾಗಿದೆ. ಇಂತಹ ಪ್ರಯೋಗಿಕ ಸಮಸ್ಯೆಗಳು ಬಾರದಂತೆ ಎಚ್ಚರ ವಹಿಸಬೇಕು ಎಂದರು.
ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತ್ಯದ ನಿಕಟಪೂರ್ವ ಸಂಘಚಾಲಕ ಮಾ. ವೆಂಕಟರಾಮ್ ಮಾತನಾಡಿದರು. ಕೃತಿಕಾರ ಡಾ.ಸುಧಾಕರ್ ಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಪಮಾ, ದಿವ್ಯಾ ಇತರರಿದ್ದರು.