- ವಿಶ್ವಾಸಾರ್ಹತೆ, ಸುರಕ್ಷತೆಗೆ ಒತ್ತು
- ಸಾರ್ವನಿಕರಿಂದ ಸೆಸ್ಕ್ ಯೋಜನೆಗೆ ಮೆಚ್ಚುಗೆ
ಮೈಸೂರು: ವಿದ್ಯುತ್ ಸರಬರಾಜಿನಲ್ಲಿ ಗ್ರಾಹಕರ ವಿಶ್ವಾಸಾರ್ಹತೆ ಮತ್ತು ಸುರಕ್ಷತೆ ಹೆಚ್ಚಿಸುವ ಸಲುವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವತಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೈಗೊಳ್ಳಲಾಗಿರುವ ಭೂಗತ ಕೇಬಲ್(ಯುಜಿ) ಅಳವಡಿಸುವ ಯೋಜನೆ ಭರದಿಂದ ಸಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ.
ನಗರದ ಸೌಂದರ್ಯ ಕಾಪಾಡುವ ಜತೆಗೆ ಹೆಚ್ಚು ಸುರಕ್ಷತೆ, ಜನ-ಜಾನುವಾರು ಸೇರಿ ಪ್ರತಿಯೊಂದು ವಸ್ತುಗಳನ್ನು ವಿದ್ಯುತ್ ಅವಘಡಗಳಿಂದ ತಪ್ಪಿಸುವ ಸಂಬಂಧ ನಗರದಲ್ಲಿ ಕೈಗೊಂಡಿರುವ ಸದರಿ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ಎಲ್ಲೆಡೆ ಸೆಸ್ಕ್‌ನ ಕಾರ್ಯದ ಬಗ್ಗೆ ಸಾರ್ವಜನಿಕರು ಪ್ರಶಂಶೆಯ ಮಾತುಗಳನ್ನಾಡುತ್ತಿದ್ದಾರೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆ ಕಡಿಮೆಗೊಳಿಸುವ ಹಾಗೂ ಮೈಸೂರು ನಗರದ ಸೌಂದರ್ಯ ಹೆಚ್ಚಿಸುವ ಸಲುವಾಗಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದೆ. ಅತ್ಯಂತ ವೇಗವಾಗಿ ನಡೆಯುತ್ತಿರುವ ಈ ಯೋಜನೆಯ ಕಾಮಗಾರಿ ಪೂರ್ಣಗೊಂಡಲ್ಲಿ, ನಗರದಾದ್ಯಂತ ಅಸ್ತಿತ್ವದಲ್ಲಿರುವ ಎಚ್‌ಟಿ/ಎಲ್‌ಟಿ ಓವರ್‌ಹೆಡ್ ಪವರ್ ಲೈನ್‌ಗಳ ವಿದ್ಯುತ್ ಮಾರ್ಗಗಳು ಭೂಗತ (ಯುಜಿ) ಕೇಬಲ್‌ಗಳಾಗಿ ಪರಿವರ್ತನೆಗೊಳ್ಳಲಿದೆ. ಶೀಘ್ರದಲ್ಲಿ ಮೈಸೂರು ವಿದ್ಯುತ್ ತಂತಿಗಳಿಗೆ ಗುಡ್ ಬೈ ಹೇಳಲಿದ್ದು, ಯುಜಿ ಕೇಬಲ್ ಮೂಲಕವೇ ನಗರದಲ್ಲಿ ವಿದ್ಯುತ್ ಸರಬರಾಜು ಮಾಡಲಿದೆ.
ಮೈಸೂರು ಪ್ರಮುಖ ಪ್ರವಾಸಿತಾಣವಾಗಿದ್ದು, ಇಲ್ಲಿನ ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ, ವಸ್ತುಪ್ರದರ್ಶನ ಸೇರಿ ಇಲ್ಲಿ ಪ್ರವಾಸಿತಾಣಗಳಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಿದ್ಯುತ್ ತಂತಿಗಳಿಗೆ ಗುಡ್‌ಬೈ ಹೇಳುತ್ತಿರುವುದರಿಂದ ಮೈಸೂರು ನಗರ ಮತ್ತಷ್ಟು ಸುಂದರವಾಗಿ ಕಾಣಲಿದ್ದು, ಇನ್ನು ಹೆಚ್ಚುನ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆ ಇದೆ.
ಪ್ರತಿಬಾರಿ ಜೋರು ಮಳೆ ಮತ್ತು ಹೆಚ್ಚಾಗಿ ಗಾಳಿ ಬೀಸಿದಾಗ ಓವರ್‌ಹೆಡ್ ಲೈನ್‌ಗಳು (ತಂತಿಗಳು) ಕೆಳಗೆ ಬೀಳುತ್ತಿದ್ದವು. ಇದರಿಂದ ಪ್ರಾಣ ಹಾನಿಯೂ ಆಗುತ್ತಿತ್ತು. ಸೆಸ್ಕ್‌ಗೂ ಅಪಾರ ನಷ್ಟ ಉಂಟಾಗುತ್ತಿತ್ತು. ಯುಜಿ ಕೇಬಲ್ ಅಳವಡಿಕೆಯಿಂದ ಅದಕ್ಕೆಲ್ಲ ಪರಿಹಾರ ದೊರೆಯಲಿದೆ.
ರಸ್ತೆಯ ಕೆಳಭಾಗ 1 ಮೀಟರ್ ಆಳದಲ್ಲಿ ಎಚ್‌ಡಿಡಿ ಮೂಲಕ ಯುಜಿ ಕೇಬಲ್ ಹಾಕಲಾಗುತ್ತಿದೆ. ಇದಕ್ಕಾಗಿ ಸಂಪೂರ್ಣ ಭೂಮಿಯನ್ನು ಹಗೆಯುತ್ತಿಲ್ಲ. ಬದಲಾಗಿ ಒಂದು ಕಡೆ ವೋಲ್ ಮಾಡುವ ಮೂಲಕ 50 ಮೀಟರ್ ಅಥವಾ 100 ಮೀಟರ್ ಅಷ್ಟು ದೂರ ಭೂಮಿ ಕೊರೆಯುವ ಮೂಲಕ ಕೇಬಲ್ ಅಳವಡಿಸಲಾಗುತ್ತಿದೆ. ಈ ವೇಳೆ ಯುಜಿಡಿ, ನೀರು ಸೇರಿ ಯಾವುದೇ ಪೈಪ್ ಅಥವಾ ಕೇಬಲ್‌ಗಳಿಗೆ ಹಾನಿಯಾದರೂ ಆ ಹಾನಿಯನ್ನು ಕೂಡ ಯುಜಿ ಕೇಬಲ್ ಅಳವಡಿಕೆಯ ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಪಡಿಸುತ್ತಿದ್ದಾರೆ. ಒಟ್ಟಾರೆ ಸಣ್ಣ-ಪುಟ್ಟ ಸಮಸ್ಯೆಗಳ ನಡುವೆಯೂ ಒಂದು ಉಪಯುಕ್ತ ಯೋಜನೆ ಭರದಿಂದ ಸಾಗುತ್ತಿದೆ.
ಭರದಿಂದ ಸಾಗಿದೆ ಕಾಮಗಾರಿ:
ನಗರ ವ್ಯಾಪ್ತಿಯಲ್ಲಿನ ನಾಲ್ಕು ಉಪ ವಿಭಾಗಗಳಾದ ಕೇಂದ್ರ ವಲಯ, ಎನ್.ಆರ್.ಮೊಹಲ್ಲಾ, ಕುವೆಂಪುನಗರ ಹಾಗೂ ಹೂಟಗಳ್ಳಿ ಉಪ ವಿಭಾಗ ವ್ಯಾಪ್ತಿಯ ಒಟ್ಟು 39 ಫೀಡರ್‌ಗಳಲ್ಲಿ ಈಗಾಗಲೇ ಯುಜಿ ಕೇಬಲ್ ಅಳವಡಿಕೆಯ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಉಳಿದ ನಾಲ್ಕು ಉಪ ವಿಭಾಗಗಳಾದ ಜ್ಯೋತಿನಗರ, ಚಾಮುಂಡಿಪುರಂ, ವಿವಿ ಮೊಹಲ್ಲಾ ಮತ್ತು ರಾಮಕೃಷ್ಣನಗರ ವಿಭಾಗಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಕೆಯ ಕಾಮಗಾರಿ ಪ್ರಗತಿಯಲ್ಲಿದೆ.
ಎಚ್‌ಟಿ, ಎಲ್‌ಟಿ ಓವರ್‌ಹೆಡ್ ಪವರ್ ಲೈನ್‌ಗಳನ್ನು ಭೂಗತ ಕೇಬಲ್‌ಗಳಾಗಿ ಪರಿವರ್ತಿಸಲು 408.94 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯಲ್ಲಿ 102 ಫೀಡರ್‌ಗಳಲ್ಲಿನ 480 ಕಿ.ಮೀ. ವ್ಯಾಪ್ತಿಯಲ್ಲಿ ಎಚ್‌ಟಿ ಯುಜಿ ಕೇಬಲ್ ಅಳವಡಿಕೆ ಹಾಗೂ 59 ಕಿಮೀ ವ್ಯಾಪ್ತಿಯ ಎಲ್‌ಟಿ ಯುಜಿ ಕೇವಲ್ ಹಾಗೂ 571 ಕಿಮೀ ವ್ಯಾಪ್ತಿಯ ಎಲ್‌ಟಿ ಎಬಿ ಕೇಬಲ್‌ಗಳನ್ನು ಭೂಗತಗೊಳಿಸಲಾಗುವುದು. ಅಲ್ಲದೇ ಭೂಗತ ಕೇಬಲ್ ಅಳವಡಿಕೆಯಿಂದ 76 ವಿತರಣಾ ಮಾರ್ಗದಲ್ಲಿನ 503 ರಿಂಗ್ ಮೇನ್ ಘಟಕಗಳು (ಆರ್‌ಎಂಯು), 30 ಕಾಂಪ್ಯಾಕ್ಟ್ ಉಪ ಕೇಂದ್ರಗಳು ಹಾಗೂ 65 ಹೆಚ್ಚುವರಿ ಪರಿವರ್ತಕಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಯೋಜನೆಯ ಉಪಯೋಗಗಳು
- ವಿದ್ಯುತ್ ಅಡಚಣೆಗಳನ್ನು ತಗ್ಗಿಸುವುದು
- ವಿದ್ಯುತ್ ಅಪಘಾತಗಳನ್ನು ಕಡಿಮೆಗೊಳಿಸುವುದು
- ನಗರದ ಸೌಂದರ್ಯವನ್ನು ಹೆಚ್ಚಿಸುವುದು
- ಮರಗಿಡಗಳ ಹನನ ತಪ್ಪಿಸಿ, ಪರಿಸರದ ಸಂರಕ್ಷಣೆ
- ನಿರ್ವಹಣಾ ವೆಚ್ಚ, ವಿದ್ಯುತ್ ನಷ್ಟ ತಪ್ಪಿಸುವುದು
- ಉಪಕರಣಗಳ ಜೀವಿತಾವಧಿ ವೃದ್ಧಿ ಆಗಲಿದೆ
- ಯಾವುದೇ ರೀತಿಯ ಹವಾಮಾನ ವೈಪರೀತ್ಯ ಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ
- ಮಳೆ, ಗಾಳಿಗೆ ಹೆಚ್ಚು ಸುರಕ್ಷಿತ, ಅತಿ ಕಡಿಮೆ ಜಾಗದಲ್ಲಿ ನಿರ್ಮಾಣ *ಕಡಿಮೆ ವಿದ್ಯುತ್ ಸೋರಿಕೆ ಮತ್ತು ದೀರ್ಘಕಾಲದ ಬಾಳಿಕೆ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ನಗರದಲ್ಲಿ ಯುಜಿ ಕೇಬಲ್ ಅಳವಡಿ ಮಾಡುತ್ತಿರುವ ತುಂಬಾ ಒಳ್ಳೆಯದು. ಇದರಿಂದ ಯಾವುದೇ ರೀತಿಯ ಹವಾಮಾನ ವೈಪರೀತ್ಯ ಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ. ಓವರ್‌ಹೆಡ್ ಲೈನ್‌ಗಳು (ತಂತಿಗಳು) ತುಂಡಾಗಿ ಬೀಳುವ ಅಪಾಯವಿರುವುದಿಲ್ಲ. ಹೆಚ್ಚು ಸುರಕ್ಷಿತವಾಗಿದೆ.
ನಗರದಲ್ಲಿ ಯುಜಿ ಕೇಬಲ್ ಅಳವಡಿಸುವಂತಹ ಯೋಜನೆಗಳನ್ನು ಎಲ್ಲರೂ ಸ್ವಾಗತಿಸಬೇಕು. ಇದರಿಂದ ಪ್ರತಿಬಾರಿ ಜೋರು ಮಳೆ ಮತ್ತು ಹೆಚ್ಚಾಗಿ ಗಾಳಿ ಬೀಸಿದಾಗ ಓವರ್‌ಹೆಡ್ ಲೈನ್‌ಗಳು (ತಂತಿಗಳು) ಕೇಳಗೆ ಬೀಳುತ್ತಿದ್ದವು. ಇದರಿಂದ ಪ್ರಾಣ ಹಾನಿಯೂ ಆಗುತ್ತಿತ್ತು. ಸೆಸ್ಕ್‌ಗೂ ಅಪಾರ ನಷ್ಟ ಉಂಟಾಗುತ್ತಿತ್ತು. ಯುಜಿ ಕೇಬಲ್ ಅಳವಡಿಕೆಯಿಂದ ಅದಕ್ಕೆಲ್ಲ ಪರಿಹಾರ ದೊರೆತಿದೆ.