ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತ  
ಮೈಸೂರು

ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತ

ಲೋಕೇಶ್ ಮನು. ಡಿ
ಪಿರಿಯಾಪಟ್ಟಣ: ತಾಲೂಕಿನ ದೊಡ್ಡಹರವೆ ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಈಜಲು ಇಳಿದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಪಿರಿಯಾಪಟ್ಟಣ ಟೌನ್ ಬಿ.ಎಂ.ರಸ್ತೆಯ ನಿವಾಸಿ ಶಿವಮೂರ್ತಿ ಪುತ್ರ ಗಣೇಶ (22) ಮತ್ತು ಕೆ.ಎಂ.ಬಡಾವಣೆಯ ನಿವಾಸಿ ಶತಾಜ್ ಪುತ್ರ ಇಮ್ರಾನ್(28) ಮೃತರು.
ಪಟ್ಟಣದಲ್ಲಿ ಟೈಲ್ಸ್ ಮತ್ತು ಪೇಂಟಿಂಗ್ ಕೆಲಸ ಮಾಡುವ ನಾಲ್ವರು ಗೆಳೆಯರು ಭಾನುವಾರ ಮಧ್ಯಾಹ್ನ ಈಜಲು ದೊಡ್ಡಹರವೆ ಬಳಿಯ ಕಾವೇರಿ ನದಿಗೆ ಇಳಿದಿದ್ದಾರೆ. ನಾಲ್ವರು ಈಜುತ್ತಿದ್ದ ಸಂದರ್ಭದಲ್ಲಿ ಇಮ್ರಾನ್ ಮುಳುಗುತ್ತಿದ್ದದ್ದನ್ನು ಕಂಡು ರಕ್ಷಿಸಲು ಹೋದ ಗಣೇಶ್ ಕೂಡ ನೀರು ಪಾಲಾದರು. ಇವರೊಂದಿಗೆ ತೆರಳಿದ್ದ ಕಾರ್ತಿಕ್ ಮತ್ತು ಸುಹೇಬ್ ಪಾಷ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಳುಗು ತಜ್ಞರಿಂದ ಭಾನುವಾರ ಸಂಜೆ ಗಣೇಶರ ಶವ ಹೊರತೆಗೆಯಲಾಯಿತು. ರಾತ್ರಿಯಾದ ಕಾರಣ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಬೆಳಗ್ಗೆ ಇಮ್ರಾನ್ ಶವ ಪತ್ತೆಯಾಗಿದ್ದು, ಇಬ್ಬರ ಮೃತದೇಹಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.