ಅಪರಾಧ 
ಮೈಸೂರು

ಶೋಕಿಗಾಗಿ ದರೋಡೆ ಮಾಡುತ್ತಿದ್ದ ಇಬ್ಬರು ಯುವಕರ ಬಂಧನ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಗಾಂಜಾ, ಇತರ ಖರ್ಚಿಗಾಗಿ ಬಾಡಿಗೆ ಕಾರು ಪಡೆದು ಕೃತ್ಯ
  • ಪೊಲೀಸರು ವಿಶೇಷ ಅಪರಾಧ ತಡೆ ಗಸ್ತಿನಲ್ಲಿದ್ದಾಗ ಸಿಕ್ಕಿಬಿದ್ದ ದರೋಡೆಕೋರರು
  • ಪರಾರಿಯಾದ ನಾಲ್ವರ ಬಂಧನಕ್ಕೆ ಶೋಧ
ಮೈಸೂರು: ಮಾದಕ ವಸ್ತು ಖರೀದಿ, ಇನ್ನಿತರ ಖರ್ಚಿಗೆ ಕಾರ್ಖಾನೆ ಕಾರ್ಮಿಕರ ಬಳಿ ದೋಚಲು ಬಾಡಿಗೆ ಕಾರಿನಲ್ಲಿ ಬಂದು ನಗರದ ರಿಂಗ್‌ರೋಡ್‌ನಲ್ಲಿ ಹೊಂಚು ಹಾಕುತ್ತಿದ್ದ ಆರು ಜನ ದರೋಡೆಕೋರರಲ್ಲಿ ಇಬ್ಬರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಮಹಮ್ಮದ್ ಯೂಸುಫ್(19) ಹಾಗೂ ಮುದಾಸೀರ್ ಪಾಷಾ(18) ಬಂಧಿತ ಆರೋಪಿಗಳು. ಸಹಚರರಾದ ಫರಾಜ್, ಮೊಹಮ್ಮದ್ ರೋಷನ್, ಸೈಯದ್ ಮುಬಾಕರ್ ಹಾಗೂ ಮೊಹ್ಮದ್ ಮಾಜ್ ಪರಾರಿಯಾಗಿದ್ದಾರೆ. ದರೋಡೆಗೆಂದು ಬಾಡಿಗೆ ತಂದಿದ್ದ ಕಾರು ಹಾಗೂ ಚಾಕುವನ್ನು ಜಪ್ತಿ ಮಾಡಲಾಗಿದೆ.
ಪೊಲೀಸರು ವಿಶೇಷ ಅಪರಾಧ ತಡೆ ಗಸ್ತಿನಲ್ಲಿದ್ದಾಗ ದರೋಡೆಕೋರರು ಸಿಕ್ಕಿಹಾಕಿಕೊಂಡಿದ್ದಾರೆ. ತಡರಾತ್ರಿ ಹೊತ್ತಿನಲ್ಲಿ ಶುಭೋದಿನಿ ಜಂಕ್ಷನ್ ಬಳಿಯ ಜೆ.ಕೆ.ಟಯರ್ ರಸ್ತೆ ತಿರುವಿನಲ್ಲಿ ಕಾರು ನಿಲ್ಲಿಸಿಕೊಂಡು ಐವರು ನಿಂತಿದ್ದನ್ನು ಗಮನಿಸಿದ ಪೊಲೀಸರು, ಕಾರಿನತ್ತ ತಮ್ಮ ವಾಹನವನ್ನು ತಿರುಗಿಸಿದಂತೆ ನಾಲ್ವರು ಓಡಿ ಹೋಗಿದ್ದಾರೆ.
ಅಷ್ಟರಲ್ಲಿ ಕಾರಿನ ಬಳಿ ಧಾವಿಸಿ, ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿ ಏಕೆ ನಿಂತಿದ್ದೀರಿ ಎಂದು ವಿಚಾರಿಸಿ, ಕಾರನ್ನು ಪರಿಶೀಲಿಸಿದಾಗ ಚಾಕು ಪತ್ತೆಯಾಗಿದೆ.
ವಶದಲ್ಲಿದ್ದ ಮಹಮ್ಮದ್ ಯೂಸುಫ್ ಹಾಗೂ ಮುದಾಸೀರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ದರೋಡೆಗೆ ಸಂಚು ರೂಪಿಸಿದ್ದರ ಬಗ್ಗೆ ಬಾಯಿಬಿಟ್ಟಿದ್ದಾರೆ.
ಸಿಗರೇಟ್, ಗಾಂಜಾ ಇನ್ನಿತರ ಖರ್ಚಿಗೆ ಜನರನ್ನು ಹೆದರಿಸಿ, ಹಣ ಇನ್ನಿತರ ಬೆಲೆಬಾಳುವ ವಸ್ತು ದೋಚಲು ಯೋಜನೆ ಮಾಡಿದ್ದರು. ಕಾರನ್ನು ಬಾಡಿಗೆ ಪಡೆದು, ಎನ್.ಆರ್.ಮೊಹಲ್ಲಾ, ಕೆ.ಡಿ.ರಸ್ತೆ, ರಿಂಗ್‌ರೋಡ್‌ನಲ್ಲಿ ಓಡಾಡಿಕೊಂಡು ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಬಳಿ ಹಣ ಇನ್ನಿತರ ವಸ್ತುಗಳನ್ನು ದೋಚಲು ಹೊಂಚು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ನಾಲ್ವರ ಬಂಧನಕ್ಕೆ ಶೋಧ ನಡೆಸಿದ್ದಾರೆ.