bike accident 
ಮೈಸೂರು

ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಲಲಾಟಾಕ್ಷ ಎಸ್
ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿ ಕಟ್ಟೆಮಳಲವಾಡಿ-ಮಾಕೋಡು ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಬ್ಬರು ವೇಗ ನಿಯಂತ್ರಿಸಲಾಗದೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಮರೂರು ಗ್ರಾಮದ ಸ್ನೇಹಿತರಾದ ಸುದೀಪ್ ನಾಯಕ (25) ಮತ್ತು ಅದೇ ಗ್ರಾಮದ ರಾಜನಾಯಕ (37) ಮೃತರು. ಇಬ್ಬರು ಎಳನೀರು ವ್ಯಾಪಾರಿಗಳಾಗಿದ್ದು ಭಾನುವಾರ ಕಾರ್ಯನಿಮಿತ್ತ ಹುಣಸೂರಿಗೆ ಬಂದು ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ಮಲಗನಕೆರೆ ಕಟ್ಟೆ ಬಳಿ ವೇಗ ನಿಯಂತ್ರಣಕ್ಕೆ ಬಾರದೆ ಬೈಕ್ ಪಲ್ಟಿಯಾಗಿ ಬೈಕ್ ಸಮೇತ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸದ ಕಾರಣ ಬಿದ್ದ ರಭಸಕ್ಕೆ ಇಬ್ಬರಿಗೂ ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದೀಪ್ ನಾಯಕ 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ರಾಜನಾಯಕಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಹುಣಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.