ಮೈಸೂರು: ಜೀನ್ಸ್ ಪ್ಯಾಂಟ್ ಸೊಂಟದ ಪಟ್ಟಿಯಲ್ಲಿ ಗಾಂಜಾ ಇಟ್ಟುಕೊಂಡು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣಾಧೀನ ಕೈದಿಗೆ ಬಟ್ಟೆ ಕೊಡುವ ನೆಪದಲ್ಲಿ ಗಾಂಜಾ ಸಾಗಿಸಲು ಯತ್ನಿಸಿದ ರೂಪಾ ಹಾಗೂ ಈ ಕೃತ್ಯಕ್ಕೆ ಸೂಚನೆ ನೀಡಿದ್ದ ಎಂ.ಸುರೇಶ್‌ನನ್ನು ಕಾರಾಗೃಹ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದು, ಮಂಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಮಾಸ್ಟರ್ ಪ್ಲಾನ್:
ವಿಚಾರಣಾಧೀನ ಕೈದಿ ಆಕಾಶ್‌ನನ್ನು ಭೇಟಿ ಮಾಡಿ, ಬಟ್ಟೆ ನೀಡಲೆಂದು ಆತನ ತಾಯಿ ರೂಪಾ ಜೈಲಿಗೆ ತೆರಳಿದ್ದರು. ಭೇಟಿಗೂ ಮೊದಲು ರೂಪಾ ತಂದಿದ್ದ ಬ್ಯಾಗ್ ಅನ್ನು ಸಿಬ್ಬಂದಿ ಪ್ರಿಯಾಂಕಾ ಹಾಗೂ ರೇವಣ್ಣ ಪರಿಶೀಲಿಸಿದ್ದಾರೆ. ಆ ವೇಳೆ ಎರಡು ಜೀನ್ಸ್ ಪ್ಯಾಂಟ್‌ಗಳ ಸೊಂಟದ ಪಟ್ಟಿಯಲ್ಲಿ ಯಾವುದೋ ವಸ್ತು ಇಟ್ಟಿರುವುದು ಗೊತ್ತಾಗಿದೆ. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಪ್ಯಾಂಟ್‌ಗಳ ಸೊಂಟದ ಪಟ್ಟಿಯಲ್ಲಿದ್ದ ವಸ್ತುಗಳನ್ನು ಹೊರತೆಗೆದಿದ್ದು, ಅದರಲ್ಲಿ ಆರು ಪ್ಲಾಸ್ಟಿಕ್ ಹಾಗೂ ಕಾರ್ಬನ್ ಪೇಪರ್‌ನಲ್ಲಿ ಸುತ್ತಿದ್ದ ಗಾಂಜಾ ರೀತಿಯ ಪೇಸ್ಟ್ ರೂಪದ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ.
ಈ ಬಗ್ಗೆ ರೂಪಾಳನ್ನು ವಿಚಾರಿಸಿದಾಗ, ಈ ವಸ್ತುಗಳನ್ನು ಕಾರಾಗೃಹದೊಳಗೆ ಸಾಗಿಸಲು ಸುರೇಶ್ ಎಂಬುವರು ತಿಳಿಸಿದ್ದಾಗಿ ಹೇಳಿದ್ದಾರೆ. ಬಳಿಕ ಕಾರಾಗೃಹ ಅಧಿಕಾರಿಗಳು, ಸುರೇಶ್‌ಗೆ ಕರೆ ಮಾಡಿ ಕರೆಸಿಕೊಂಡು ವಿಚಾರಿಸಿದ್ದಾರೆ. ಅವರು ಆರೋಪ ನಿರಾಕರಿಸಿದರಾದರೂ ಇಬ್ಬರನ್ನೂ ಮಂಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.