ನಗರದ ನಟರಾಜ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಚಿದಾನಂದ ಸ್ವಾಮೀಜಿ, ಪ್ರೊ.ಕೆ.ಬಿ.ಪ್ರವೀಣ್, ಪ್ರೊ.ಎಸ್.ಶಿವರಾಜಪ್ಪ, ಡಾ.ಅಮ್ಮರಾಮಚಂದ್ರ, ಡಾ.ಮಹೇಶ್ ದಳಪತಿ ಇದ್ದರು.
ಮೈಸೂರು: ನಮ್ಮ ಸಂಪರ್ಕ, ವಿಶ್ವಾಸ, ನಂಬಿಕೆಯೇ ನಮ್ಮ ಸಂಸ್ಕೃತಿ. ನಮ್ಮ ಜೀವನದಲ್ಲಿ ಸಂಸ್ಕೃತಿ ಹಾಸು ಹೊಕ್ಕಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಬಿ.ಪ್ರವೀಣ್ ತಿಳಿಸಿದರು.
ನಗರದ ನಟರಾಜ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಕೃತಿ ಎಂದರೆ ಕೇವಲ ಆಚರಣೆಗಳಲ್ಲ. ನಾವು ಇಡೀ ಬ್ರಹ್ಮಾಂಡದ ಸಂಪರ್ಕದ ಮೇಲೆ ವಿಶ್ವಾಸ ಇಟ್ಟುಕೊಂಡಿರುತ್ತೇವೋ ಅದು ಸಂಸ್ಕೃತಿಯನ್ನು ತೋರಿಸುತ್ತದೆ. ಸಂಸ್ಕೃತಿಯ ಬಗ್ಗೆ ಯೋಚನೆ ಮಾಡಬೇಕಾದರೆ ವಿಶ್ವಕ್ಕೆ ಅರ್ಹವಾದಂತಹ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಸಂಸ್ಕೃತಿಯ ಬಗ್ಗೆ ಶಿಕ್ಷಕರಿಗೆ ಬಹಳಷ್ಟು ಅರಿವಿರಬೇಕು. ಬಹಳ ಹಿಂದಿನಿಂದ ಹರಿದು ಬಂದಂತಹ ವಿಶೇಷತೆಯೇ ನಮ್ಮ ಸಂಸ್ಕೃತಿ. ಇದರ ಬಗ್ಗೆ ಪುಸ್ತಕಗಳಲ್ಲಿ ಓದುವುದರ ಜತೆಗೆ ಹಿರಿಯರಿಂದ, ಗುರುಗಳಿಂದ ಕೇಳಿ ತಿಳಿದುಕೊಂಡಿರುತ್ತೇವೆ. ಅವರ ಅನುಭವ ಆಧರಿಸಿ ನಾವು ಅದನ್ನು ಸ್ವೀಕರಿಸಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಸಂಸ್ಕೃತಿ ಎನ್ನುವುದು ಎಲ್ಲರಿಗೂ ಒಂದೇ ಅನುಭವ ಕೊಡುವುದಿಲ್ಲ. ಸಂಸ್ಕೃತಿಯ ಮೇಲ್ಪದರದಿಂದ ಆಳಕ್ಕೆ ಹೋದಂತೆ ಹಲವಾರು ವಿಚಾರ, ವಿಷಯಗಳು ನಮಗೆ ಅರಿವನ್ನುಂಟು ಮಾಡುತ್ತದೆ. ಅನೇಕ ಸಂಬಂಧಗಳು, ಸಂಪರ್ಕ, ಪ್ರೀತಿ, ವಿಶ್ವಾಸ, ನಂಬಿಕೆ, ಸ್ನೇಹದ ಬಗ್ಗೆ ತಿಳಿದುಕೊಂಡರೆ ತಾತ್ವಿಕವಾಗಿ ಎಲ್ಲೋ ಹೋಗುತ್ತೇವೆ ಎಂದು ತಿಳಿಸಿದರು.
ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ, ವಿಶೇಷ ಅಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಕಲಾವಿದ ಡಾ.ಅಮ್ಮರಾಮಚಂದ್ರ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹೇಶ್ ದಳಪತಿ ಇದ್ದರು.