ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದ ದೇವಿನಗರ ಕ್ರಾಸ್‌ನಲ್ಲಿ ಮಂಗಳವಾರ ಕ್ರಷರ್ ಲಾರಿಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮುಖಂಡರಾದ ಶಿವಣ್ಣ ಕರಡಿಪುರ, ವಸಂತ, ಕೃಷ್ಣಮೂರ್ತಿ, ಸುಭಾನ್ ವುಲ್ಲಾ, ಕುಮಾರಶೆಟ್ಟಿ, ಹರೀಶ್, ಉಮೇಶ್, ಚಂದ್ರಶೆಟ್ಟಿ ಇತರರು ಭಾಗವಹಿಸಿದ್ದರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಗೊರಹಳ್ಳಿ ಗ್ರಾಮದ ದೇವಿನಗರ ಕ್ರಾಸ್‌ನಲ್ಲಿ ಕ್ರಷರ್ ಲಾರಿಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸರಕು ತುಂಬಿಕೊಂಡು ಸಂಚರಿಸುವುದರಿಂದ ರಸ್ತೆ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ಮಂಗಳವಾರ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ನಿತ್ಯವೂ ಕ್ರಷರ್ ಲಾರಿಗಳಲ್ಲಿ ಬಾಡಿ ಲೆವೆಲ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೈಜ್ ಕಲ್ಲು, ಜಲ್ಲಿಕಲ್ಲು ಗಳನ್ನು ತುಂಬಿಕೊಂಡು ದೇವಿನಗರ ಕ್ರಾಸ್ ಮೂಲಕ ಸಾಗಿಸಲಾಗುತ್ತಿದೆ. ನಿಯಮ ಮೀರಿ ಕಲ್ಲು-ಜಲ್ಲಿಕಲ್ಲು ಸಾಗಿಸುವ ಪರಿಣಾಮ ದೇವಿನಗರ ಕ್ರಾಸ್‌ನ ಅಪಾಯಕಾರಿ ತಿರುವಿನಲ್ಲಿ ರಸ್ತೆಗೆ ಜಲ್ಲಿಕಲ್ಲುಗಳು ಬೀಳುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಅಪಘಾತಕ್ಕೊಳಗಾಗುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಲಾರಿಗಳಲ್ಲಿ ಮಿತಿಮೀರಿದ ಪ್ರಮಾಣದಲ್ಲಿ ಕಲ್ಲು ತುಂಬಿಕೊಂಡು ಹೋಗುವುದನ್ನು ತಕ್ಷಣ ನಿಲ್ಲಿಸಬೇಕು. ರಸ್ತೆಗೆ ಬೀಳುವ ಜಲ್ಲಿಕಲ್ಲುಗಳಿಂದ ವಾಹನ ಸವಾರರ ಜೀವಕ್ಕೆ ಅಪಾಯ ಎದುರಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕು. ಅಧಿಕ ಪ್ರಮಾಣದಲ್ಲಿ ಜಲ್ಲಿಕಲ್ಲು ಸಾಗಿಸುವ ಲಾರಿಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಸ್ತೆಯ ತಿರುವಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮುಖಂಡರಾದ ಶಿವಣ್ಣ ಕರಡಿಪುರ, ವಸಂತ, ಕೃಷ್ಣಮೂರ್ತಿ, ಸುಭಾನ್ ವುಲ್ಲಾ, ಕುಮಾರಶೆಟ್ಟಿ, ಹರೀಶ್, ಉಮೇಶ್, ಚಂದ್ರಶೆಟ್ಟಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.