ತಿ.ನರಸೀಪುರ ಪಟ್ಟಣದ ವಿದ್ಯಾನಗರ ಶ್ರೀ ಶನೇಶ್ವರ - ಶ್ರೀ ಛಾಯಾದೇವಿ ದೇವಾಲಯ ರಸ್ತೆಯ ಕೊನೆಯ ಚರಂಡಿಯಲ್ಲಿ ತ್ಯಾಜ್ಯ ನೀರು ನಿಂತಿರುವುದು.  
ಮೈಸೂರು

ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ತೊಂದರೆ

ನಾಗೇಶ ಎಸ್
ತಿ.ನರಸೀಪುರ: ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸಂಪರ್ಕ ಕಲ್ಪಿಸದೆ, ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವುದರಿಂದ ಪಟ್ಟಣದ ವಿದ್ಯಾನಗರ ಹಾಗೂ ಹೌಸಿಂಗ್ ಬೋರ್ಡ್ ಬಡಾವಣೆಗಳಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಸಡ್ಡೆಯಿಂದಾಗಿ ಪುರಸಭೆಯ 10ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ವಿದ್ಯಾನಗರದ ಶ್ರೀ ಶನೇಶ್ವರ-ಶ್ರೀ ಛಾಯಾದೇವಿ ದೇವಾಲಯ ರಸ್ತೆಯ ಕೊನೆಯ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿ ಹೋಗಿ ರಸ್ತೆಗೆ ಹರಿಯುತ್ತಿದೆ. ಹೌಸಿಂಗ್ ಬೋರ್ಡ್ ಬಡಾವಣೆ ಬಳಿಯಿರುವ ಮನೆಗಳ ಮುಂಭಾಗದ ಚರಂಡಿಯಲ್ಲಿ ತ್ಯಾಜ್ಯ ನೀರು ನಿಂತಲ್ಲೇ ನಿಂತು ಪಾಚಿ ಬೆಳೆದಿದೆ.
ಮೇಲ್ದರ್ಜೆಗೇರಿದ ಪುರಸಭೆಯಲ್ಲಿ ವಿಲೀನಗೊಂಡಿರುವ ಆಲಗೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈ ಹಿಂದಿನ ವಿದ್ಯಾನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ವಸತಿ ವಿನ್ಯಾಸದಂತೆ ಬಡಾವಣೆಗಳನ್ನು ರಚಿಸುವ ಮೊದಲೇ ನಿವೇಶನ ಖರೀದಿಸಿ, ಮನೆಗಳನ್ನು ನಿರ್ಮಾಣ ಮಾಡಿರುವುದು ಹಾಗೂ ಪುರಸಭೆಯಿಂದಲೂ ಯಾವುದೇ ಯೋಜನೆ ರೂಪಿಸದೆ ಇರುವುದರಿಂದ ಚರಂಡಿ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಪರಿಣಾಮ ಚರಂಡಿಗಳಲ್ಲಿ ತ್ಯಾಜ್ಯ ನೀರು ನಿಂತಿದ್ದರೆ, ಒಳಚರಂಡಿಗಳಲ್ಲಿ ತುಂಬಿ ಹೋಗಿ ರಸ್ತೆಗೆ ಹರಿಯುತ್ತಾ ಸಾಂಕ್ರಾಮಿಕ ರೋಗ ಹರಡುವ ತಾಣವಾಗುತ್ತಿವೆ.
ಹಲವು ವರ್ಷಗಳಿಂದ ಶ್ರೀ ಶನೇಶ್ವರ-ಶ್ರೀ ಛಾಯಾದೇವಿ ದೇವಾಲಯದ ರಸ್ತೆ ಚರಂಡಿಯಲ್ಲಿ ತ್ಯಾಜ್ಯ ನೀರು ನಿಲ್ಲುತ್ತಿರುವ ಕುರಿತು ಅಲ್ಲಿನ ನಿವಾಸಿಗಳು ಪುರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ನಿರ್ಮಾಣದ ವೇಳೆ ಗುತ್ತಿಗೆದಾರ ಡೆಕ್ ಸ್ಲ್ಯಾಬ್ ಕೆಳಗೆ ಹಾಕಿದ್ದ ಮರಮುಟ್ಟುಗಳನ್ನು ತೆಗೆಯದೆ ಹಾಗೇ ಬಿಟ್ಟಿದ್ದರಿಂದ ನೀರು ಹರಿದು ಹೋಗುತ್ತಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಲು ಪುರಸಭೆ ಅಧಿಕಾರಿಗಳ ಕೈಯಲ್ಲಿ ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದಿಂದ ಹೆಳವರಹುಂಡಿ ಹಾಗೂ ಮುದ್ದಬೀರನಹುಂಡಿ ಗ್ರಾಮಗಳಿಗೆ ಸಂಪರ್ಕ ಸಿಗುವಂತೆ ಬಡಾವಣೆಯನ್ನು ನಿರ್ಮಿಸಲಾಗಿತ್ತು. ನಗರಾಭಿವೃದ್ಧಿ ಅನುಮೋದಿತ ಬಡಾವಣೆ ಅಥವಾ ಲೇಔಟ್ ವಿನ್ಯಾಸ ಇಲ್ಲದೆ ಮನೆಗಳನ್ನು ನಿರ್ಮಿಸಿದ್ದರಿಂದ ಚರಂಡಿಗಳಷ್ಟೇ ಅಲ್ಲ, ಒಂದಕ್ಕೊಂದು ರಸ್ತೆಗಳ ಸಂಪರ್ಕವೂ ಸರಿ ಇಲ್ಲದಂತಾಗಿದೆ. ವರುಣ ವಿಧಾನಸಭಾ ಕ್ಷೇತ್ರಕ್ಕೆ ವಿದ್ಯಾನಗರ ಸೇರಿದಂತೆ ಜನವಸತಿ ಪ್ರದೇಶವಾಗಿ ಬೆಳೆಯುತ್ತಿರುವ ಆಸುಪಾಸಿನ ಬಡಾವಣೆಗಳೆಲ್ಲವೂ ಸೇರುತ್ತವೆ.
ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿದ್ದ ಬಡಾವಣೆ ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡು ದಶಕವೇ ಆಗುತ್ತಿದೆ. ಇಲ್ಲಿನ ನಿವೇಶನಗಳಿಗೆ ಖಾತೆ ಮಾಡಿಕೊಡಲು ಹಾಗೂ ಮನೆಗಳ ನಿರ್ಮಾಣಕ್ಕೆ ಅನುಮತಿ ಪತ್ರ ಕೊಡಲು ಸದಸ್ಯರು ಹಾಗೂ ಅಧಿಕಾರಿಗಳು ಕೊಡುವಷ್ಟು ಪ್ರಾಮುಖ್ಯತೆಯನ್ನು ಅಭಿವೃದ್ಧಿಗೆ ನೀಡದಿದ್ದರಿಂದ ಬಡಾವಣೆ ಅಧ್ವಾನಗೊಂಡಿದೆ. ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಕುಳಿತು ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದ್ದ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ.