ಹುಣಸೂರು ಬಿಜೆಪಿ ಘಟಕದ ವತಿಯಿಂದ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯ ರಘು ಕೌಟಿಲ್ಯ ಅವರನ್ನು ಸನ್ಮಾನಿಸಲಾಯಿತು. ಕಾಂತರಾಜು, ಬಿಳಿಕೆರೆ ಪ್ರಸನ್ನ, ದೇವರಹಳ್ಳಿ ಸೋಮಶೇಖರ್, ರಾಮಚಂದ್ರ ಇತರರು ಇದ್ದರು.
ಹುಣಸೂರು: ವಿಧಾನಪರಿಷತ್‌ಗೆ ನೂತನವಾಗಿ ಆಯ್ಕೆಯಾದ ಬಿಜೆಪಿಯ ರಘು ಕೌಟಿಲ್ಯ ಅವರಿಗೆ ತಾಲೂಕು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ಮೈಸೂರಿನ ಪಕ್ಷದ ಕಚೇರಿಯಲ್ಲಿ ಶನಿವಾರ ತಾಲೂಕು ಅಧ್ಯಕ್ಷ ಕಾಂತರಾಜು ಮತ್ತವರ ತಂಡ ರಘು ಕೌಟಿಲ್ಯ ಅವರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಎಂಎಲ್ಸಿ ರಘು ಕೌಟಿಲ್ಯ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಕಾಯಕ ಸಮಾಜದಂತಹ ತಳಸಮುದಾಯ, ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳನ್ನು ಗುರುತಿಸಿ ರಾಜಕೀಯ ಅಧಿಕಾರ ನೀಡುವ, ನೀಡುತ್ತಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ನನ್ನನ್ನು ಅಭ್ಯರ್ಥಿಯನ್ನಾಗಿಸಿ ವಿಜಯಶಾಲಿಯನ್ನಾಗಿಸಿದ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಚಿರಋಣಿ ಎಂದರು.
ಬಿಜೆಪಿ ಅಭಿವೃದ್ಧಿಯ ಮಂತ್ರವೊಂದನ್ನು ಹೊರತುಪಡಿಸಿ ಇನ್ಯಾವುದೇ ವಿಷಯಕ್ಕೂ ಪ್ರಾಧಾನ್ಯತೆ ನೀಡುವುದಿಲ್ಲ. ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಸರ್ವರ ಕಲ್ಯಾಣವೇ ಬಿಜೆಪಿಯ ಗುರಿ. ವಿಧಾನಪರಿಷತ್ ಸದಸ್ಯರಾಗಿ ನನಗೆ ದೊರಕುವ ಅನುದಾನಗಳನ್ನು ಎಲ್ಲ ಕ್ಷೇತ್ರಗಳಿಗೂ ನೀಡುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆಂದರು.
ಹಿರಿಯ ಮುಖಂಡ ದೇವರಹಳ್ಳಿ ಸೋಮಶೇಖರ್, ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಬಿಜೆಪಿ(ಗ್ರಾಮಾಂತರ)ಉಪಾಧ್ಯಕ್ಷ ರಾಮಚಂದ್ರ ಇತರರು ಹಾಜರಿದ್ದರು.