ಎಚ್.ಡಿ.ಕೋಟೆ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಆದಿವಾಸಿ ಮುಖಂಡರ ಜತೆ ಎಸ್‌ಐಆರ್ ಕುರಿತ ಜಾಗೃತಿ ಸಭೆ ಆಯೋಜಿಸಲಾಗಿತ್ತು. ತಹಸೀಲ್ದಾರ್ ಶ್ರೀನಿವಾಸ್, ಜಿ.ಆರ್ ಮಹೇಶ್ ನಾಗರಾಜು ಇದ್ದರು. 
ಮೈಸೂರು

ಆದಿವಾಸಿಗಳು ಮತದಾನ ಹಕ್ಕಿನಿಂದ ವಂಚಿತರಾಗದಿರಲಿ

ಎಚ್.ಡಿ.ಕೋಟೆ: ಆದಿವಾಸಿ ಜನರು ಕೂಲಿ ಅರಸಿ ಬೇರೆಡೆಗೆ ಹೋಗುವುದರಿಂದ ಅವರು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿಯಿಂದ ಕೈತಪ್ಪಿ ಮತದಾನದಿಂದ ವಂಚಿತರಾಗಬಾರದು ಎಂದು ಉಪವಿಭಾಗಾಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆದಿವಾಸಿ ಮುಖಂಡರಿಗೆ ಎಸ್‌ಐಆರ್ ಕುರಿತು ಆಯೋಜಿಸಿದ್ದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಸುಮಾರು 27 ಸಾವಿರ ಆದಿವಾಸಿ ಸಮುದಾಯದ ಮತದಾರರು ಇದ್ದು ಈಗಾಗಲೇ ಮನೆಮನೆಗೆ ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಅರ್ಜಿ (ಎನ್ಯುಮರೇಷನ್ ಫಾರ್ಮ್) ನೀಡಲಾಗಿದೆ. ಯಾರೂ ಗೊಂದಲಕ್ಕೆ ಒಳಗಾಗುವುದು ಬೇಡ. ಯಾವುದೇ ಕಾರಣಕ್ಕೂ ಯಾರ ಹೆಸರನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈ ಬಿಡುವುದಿಲ್ಲ ಎಂದರು.
ಈಗಾಗಲೇ ಮನೆಮನೆಗೆ ನೀಡಿದ ಮತದಾರ ಪರಿಷ್ಕರಣೆ ಅರ್ಜಿಯನ್ನು ಭರ್ತಿ ಮಾಡಿ ಜು.29ರೊಳಗೆ ವಾಪಸ್ ಬಿಎಲ್‌ಒಗಳಿಗೆ ನೀಡಬೇಕು. ಇಲ್ಲದಿದ್ದರೆ ಅಂತಹವರು ಮತದಾನದಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕೊಟ್ಟಿರುವ ಅರ್ಜಿಯನ್ನು ಸುರಕ್ಷಿತವಾಗಿ ಭರ್ತಿ ಮಾಡಿ ವಾಪಸ್ ನೀಡಬೇಕು. ಭರ್ತಿ ಮಾಡಲು ಗೊತ್ತಿಲ್ಲದಿದ್ದರೆ ಹಾಗೇ ಇಟ್ಟುಕೊಂಡು ನಂತರ ಬಿಎಲ್‌ಒಗಳ ಮೂಲಕ ಭರ್ತಿ ಮಾಡಿಸಿ ನೀಡಬೇಕು. ಆಶ್ರಮ ಶಾಲೆಯ ಶಿಕ್ಷಕರನ್ನು ಸಹಾಯಕ್ಕೆ ಬಳಸಿಕೊಳ್ಳಲು ಅವಕಾಶ ಇದೆ. ಈ ಬಗ್ಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಓದು ಬಾರದವರಿಗೆ ಆಯಾ ಭಾಗದ ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಶಿಕ್ಷಕರ ಸಹಕಾರ ಪಡೆದು ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿಸಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ 118 ಹಾಡಿಗಳಿಗೂ ಮತದಾರ ಪಟ್ಟಿ ಪರಿಷ್ಕರಣೆಯ ಮಾಹಿತಿ ಇದೆ. ಹಾಗಾಗಿ ಯಾರೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಆದಿವಾಸಿ ಮುಖಂಡರು ಸಹಕಾರ ನೀಡಬೇಕು. ಹಾಡಿಯಲ್ಲಿ ವಾಸ ಮಾಡುತ್ತಿರುವ ಎಲ್ಲ ಜನರು ಮತದಾನದಿಂದ ಹೊರಗುಳಿಯದಂತೆ ಮುಖಂಡರು ನಿಗಾ ವಹಿಸಬೇಕು ಎಂದರು.
ಬಹುತೇಕ ಹಾಡಿಯ ಜನರು ಕೂಲಿ ಅರಸಿ ಹೊರಗೆ ಹೋಗುವುದರಿಂದ ಬೆಳಗ್ಗೆ ಮತ್ತು ಸಂಜೆ ಹಾಡಿಗೆ ಭೇಟಿ ನೀಡಿ, ಅರ್ಜಿ ಪಡೆಯುವ ಕೆಲಸವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಸ್ತುವಾರಿ ಮಾಡಬೇಕು. ದಾಖಲೆ ಇಲ್ಲದಿದ್ದರೆ ವಾಸ ಮಾಡುತ್ತಿದ್ದ ಸ್ಥಳ ಮಹಜರು ಮಾಡಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಮಾಡಲಾಗುತ್ತದೆ. ಹಾಗಾಗಿ ಜನರಿಗೆ ಯಾವುದೇ ಗೊಂದಲಬೇಡ. ಯಾರಿಗೆ ಎನ್ಯುಮರೇಷನ್ ಫಾರ್ಮ್ ತಲುಪಿಲ್ಲ ಅವರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆದಿವಾಸಿ ಮುಖಂಡರು ಮಾತನಾಡಿ, ಮೂರು ನಾಲ್ಕು ತಿಂಗಳಿಂದ ಆದಿವಾಸಿಗಳಿಗೆ ಪೌಷ್ಟಿಕ ಆಹಾರ ಪದಾರ್ಥ ತಲುಪಿಲ್ಲ. ಹಾಗಾಗಿ ನಮ್ಮ ಜನರು ಕೂಲಿ ಅರಸಿ ಹೊರಗೆ ಹೋಗಿದ್ದಾರೆ. ಅವರನ್ನು ಕರೆತರುವ ಕೆಲಸ ಇಲಾಖೆಯಿಂದ ಆಗಬೇಕು. ಬಿಎಲ್‌ಒಗಳೇ ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಭರ್ತಿ ಮಾಡಲು ತಿಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಮತದಾರರನ್ನು ಪತ್ತೆ ಮಾಡಿಕೊಡುವ ಕೆಲಸವನ್ನು ಮುಖಂಡರು ಮಾಡಿಕೊಟ್ಟರೆ ಸಾಕು ಅರ್ಜಿ ಭರ್ತಿ ಮಾಡಿಸಿಕೊಳ್ಳುವ ಕೆಲಸವನ್ನು ನಾವು ಮಾಡಿಸುತ್ತೇವೆ ಎಂದು ಹೇಳಿದರು.
ಆದಿವಾಸಿ ಮುಖಂಡ ನಿವೃತ್ತಿ ಶಿಕ್ಷಕ ಗಣೇಶ ಮಾತನಾಡಿ, ವಿಶೇಷವಾಗಿ ಆದಿವಾಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿಸಿದರೆ ಅನುಕೂಲ ಆಗುತ್ತದೆ. ಕ್ಷೇತ್ರದ ಹದಿನೈದು ಪಂಚಾಯಿತಿಗಳಲ್ಲಿ ನಮ್ಮ ಆದಿವಾಸಿ ಜನರು ವಾಸ ಮಾಡುತ್ತಿದ್ದು, ಹೆಚ್ಚು ಜನರು ಕೂಲಿಗಾಗಿ ಹೊರಗೆ ಹೋಗಿದ್ದಾರೆ. ಇಒ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಕೆಲಸವಾದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಮಂಜುನಾಥ್ ಮಾತನಾಡಿ, ಎಸ್‌ಐಆರ್ ಕುರಿತು ಜಾಗೃತಿ ಮೂಡಿಸುವ ಕೆಲಸ ಈಗಾಗಲೇ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಇಒ ರವಿಚಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣ ತಾಲೂಕು ಅಧಿಕಾರಿಗಳಾದ ಜಿ.ಆರ್.ಮಹೇಶ್, ನಾಗರಾಜು, ಆದಿವಾಸಿ ಮುಖಂಡರಾದ ಕಾಳಕಲ್ಕರ್, ನೂರಾಳಯ್ಯ, ದಿವಾಕರ, ರಾಜೇಶ್, ತಿಮ್ಮನಾಯಕ, ಶೇಖರ್, ವಿಜಯ್ ಇದ್ದರು.