ಪೌಷ್ಟಿಕ ಆಹಾರ ಸಾಮಗ್ರಿ ಕಿಟ್ ವಿತರಣೆಗೆ ಆಗ್ರಹಿಸಿ ಆದಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಸುನಿಲ್, ಸದಸ್ಯರಾದ ಮೀನಾಕ್ಷಿ, ಗಂಗಾ, ಲಕ್ಷ್ಮೀ, ಕಾವ್ಯಾ, ಪವಿತ್ರಾ, ಸವಿತಾ ಇನ್ನಿತರರಿದ್ದರು.
- ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಧರಣಿ
ಮೈಸೂರು: ಪೌಷ್ಟಿಕ ಆಹಾರ ಸಾಮಗ್ರಿ ಕಿಟ್ ವಿತರಣೆಗೆ ಆಗ್ರಹಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಆದಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೈಸೂರು, ಚಾಮರಾಜನಗರ, ಕೊಡಗು ಸೇರಿದಂತೆ ರಾಜ್ಯದ 8 ಜಿಲ್ಲೆಗಳ ಸುಮಾರು 48,000 ಆದಿವಾಸಿ ಕುಟುಂಬಗಳಿಗೆ ಪ್ರತಿ ತಿಂಗಳು ವಿತರಿಸುವ ಪೌಷ್ಟಿಕ ಆಹಾರದ ಕಿಟ್ 6 ತಿಂಗಳಿಂದ ವಿತರಣೆ ಮಾಡಿಲ್ಲ.
ಟೆಂಡರ್ ಸಂಬಂಧಿತ ತಾಂತ್ರಿಕ ಸಮಸ್ಯೆ ಇದಕ್ಕೆ ಕಾರಣ ಎಂದು ಇಲಾಖೆ ಹೇಳುತ್ತಿದೆ. ಮೇ, ಜೂನ್‌ನಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದಾಗ, 2 ಬಾರಿಯೂ 10 ದಿನದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂಬ ಭರವಸೆ ನೀಡಿದ್ದರು.
ಆದರೆ, ಈ ವರೆಗೂ ಬಗೆಹರಿದಿಲ್ಲ. ಹೀಗಾದರೆ ಆದಿವಾಸಿ ಸಮುದಾಯಗಳಲ್ಲಿರುವ ಅಪೌಷ್ಟಿಕತೆ ನಿವಾರಣೆಗಾಗಿ ಇರುವ ಈ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಅಥವಾ ಟೆಂಡರ್ ಕರೆಯುವವರೆಗೆ ತಾತ್ಕಾಲಿಕವಾಗಿ ಆಹಾರ ಸಾಮಗ್ರಿ ಜಿಲ್ಲಾಡಳಿತದಿಂದಲೇ ಖರೀದಿಸಿ ವಿತರಿಸಬೇಕು ಎಂದು ಆಗ್ರಹಿಸಿದರು.
2026ರ ಜನವರಿ, ಫೆಬ್ರವರಿಯಲ್ಲೂ ಪೌಷ್ಟಿಕ ಆಹಾರ ಸಾಮಗ್ರಿ ವಿತರಣೆ ಮಾಡಿಲ್ಲ. ಮಾರ್ಚ್‌ನಲ್ಲಿ ಜನವರಿ ತಿಂಗಳ ಕಿಟ್ ವಿತರಿಸಲಾಗಿದೆ. ಹಿಂದೆ 45 ದಿನಗಳಿಗೊಮ್ಮೆ ಕೊಡುತ್ತಿದ್ದ ಈ ಸೌಲಭ್ಯವನ್ನು ಆದಿವಾಸಿಗಳ ಸಂಕಷ್ಟವನ್ನು ನೋಡಿ ಮತ್ತು ನಿರಂತರ ಹೋರಾಟದ ಫಲವಾಗಿ 3 ವರ್ಷಗಳ ಹಿಂದಿನ ಬಜೆಟ್‌ನಲ್ಲಿ ಪ್ರತಿ ತಿಂಗಳು ಕೊಡುವಂತೆ ಮಾಡಲಾಯಿತು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ದುಸ್ಥಿತಿ ಉಂಟಾಗಿದೆ. ಈ ವರ್ಷ ಬರಗಾಲ ಕೂಡ ಬಂದಿರುವುದರಿಂದ ಇವರಿಗೆ ಸಮರ್ಪಕ ಕೂಲಿ ಕೆಲಸವೂ ದೊರಕುತ್ತಿಲ್ಲ ಎಂದು ಹೇಳಿದರು.
ಸಾಲದೆಂಬಂತೆ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಮೊದಲಾದ ಪಿಂಚಣಿ ನೀಡಲು ಇದ್ದ ನಿಯಮ ಜನರಿಗೆ ಸರಿಯಾಗಿ ಮಾಹಿತಿಯೇ ನೀಡದೆ ಬದಲಾಯಿಸಲಾಗಿದೆ. ಅರ್ಹತೆಗೆ ಇರುವ ಆದಾಯ ಮಿತಿಯನ್ನು 32,000 ರೂ.ಗೆ ಇಳಿಸಲಾಗಿದೆ. ಹೊಸದಾಗಿ ಜು. 31ರೊಳಗೆ ಆದಾಯ ಪ್ರಮಾಣಪತ್ರ ನೀಡಲು ಆದೇಶಿಸಲಾಗಿದೆ.
ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳು ಎಸ್‌ಐಆರ್ ಕೆಲಸದಲ್ಲಿ ನಿರತರಾಗಿದ್ದು, ಈ ಸಮಸ್ಯೆಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಆದಿವಾಸಿಗಳು ಆಹಾರ ಕಿಟ್ ಇಲ್ಲದೆ, ಪಿಂಚಣಿಯೂ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಅಳಲು ತೊಡಿಕೊಂಡರು.
ಹಕ್ಕೊತ್ತಾಯಗಳು:
ಏಪ್ರಿಲ್, ಮೇ, ಜೂನ್, ಜುಲೈ ತಿಂಗಳ ಪೌಷ್ಟಿಕ ಆಹಾರ ಸಾಮಗ್ರಿ ಕಿಟ್‌ಗಳನ್ನು ಒಟ್ಟಿಗೆ ವಿತರಿಸಲು ಕ್ರಮ ವಹಿಸಬೇಕು. ರಾಜ್ಯ ಮಟ್ಟದಲ್ಲಿ ಇದಕ್ಕೆ ತಾಂತ್ರಿಕ ಸಮಸ್ಯೆಗಳಿದ್ದರೆ, ಜಿಲ್ಲಾ ಮಟ್ಟದಲ್ಲೇ ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕು.
ಕಳೆದ ಆರ್ಥಿಕ ವರ್ಷದಲ್ಲಿ ಬಾಕಿ ಉಳಿಸಿರುವ 2 ತಿಂಗಳ ಕಿಟ್ ವಿತರಣೆ ಕೂಡ ಈ ವರ್ಷ ಹೆಚ್ಚುವರಿಯಾಗಿ ಕೊಡಬೇಕು. 4-5 ತಿಂಗಳುಗಳಿಂದ ತಡೆಹಿಡಿದಿರುವ ಸಾಮಾಜಿಕ ಭದ್ರತಾ ಯೋಜನೆಯಾದ ವೃದ್ಧಾಪ್ಯ ವೇತನ, ವಿಧವಾ ವೇತನ ಮೊದಲಾದ ಮಾಸಾಶನ (ಪಿಂಚಣಿ) ಬಿಡುಗಡೆ ಮಾಡಬೇಕು. ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಅರ್ಹರಿಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಸುನಿಲ್, ಸದಸ್ಯರಾದ ಮೀನಾಕ್ಷಿ, ಗಂಗಾ, ಲಕ್ಷ್ಮೀ, ಕಾವ್ಯಾ, ಪವಿತ್ರಾ, ಸವಿತಾ ಇನ್ನಿತರರಿದ್ದರು.