ಪೌಷ್ಟಿಕ ಆಹಾರ ಸಾಮಗ್ರಿ ಕಿಟ್ ವಿತರಣೆಗೆ ಆಗ್ರಹಿಸಿ ಆದಿವಾಸಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಾದಮ್ಮ, ಕುಮಾರಿ, ನಿಂಗಮ್ಮ, ಮೀನಾಕ್ಷಿ, ಪ್ರಕಾಶ್, ಚಂದ್ರಕಲಾ, ರಮೇಶ್, ಸುನಿಲ್, ಸೀಮಾ ಆಸಿಯಾ ಬೇಗಂ ಇನ್ನಿತರರಿದ್ದರು.
- ವಿತರಣೆ ವಿಳಂಬಕ್ಕೆ ಆಕ್ರೋಶ
- ಜಿಲ್ಲಾಧಿಕಾರಿ ಕಚೇರಿ ಎದುರು ಎಐಜೆೆಎಎಸ್‌ಸಿ ಪ್ರತಿಭಟನೆ
ಮೈಸೂರು: ಆದಿವಾಸಿಗಳ ಪೌಷ್ಟಿಕ ಆಹಾರ ಸಾಮಗ್ರಿ ಕಿಟ್ ವಿತರಣೆಯಲ್ಲಿ ವಿಳಂಬ ಖಂಡಿಸಿ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (ಎಐಜೆೆಎಎಸ್‌ಸಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಹೆಗ್ಗಡದೇವನಕೋಟೆ, ಸರಗೂರು, ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ವಾಸಿಸುವ ಬಹುತೇಕ ಆದಿವಾಸಿ ಜನರು ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ. ಅನಕ್ಷರತೆ, ಅಪೌಷ್ಟಿಕತೆ, ಬಡತನದೊಂದಿಗೆ ಬದುಕುವ ಇವರು ಕಾನೂನಿನ ಅರಿವಿಲ್ಲದ ಮುಗ್ಧರಾಗಿದ್ದಾರೆ. ಅವರಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಪ್ರತಿ ತಿಂಗಳು ಐಟಿಡಿಪಿ ಮೂಲಕ ನೀಡುತ್ತಿರುವ ವಿಶೇಷ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ತಡವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಏಪ್ರಿಲ್‌ನಲ್ಲಿ ಈ ಯೋಜನೆಯ ಟೆಂಡರ್ ವಿಳಂಬ ಕಾರಣ ನೀಡಿ ಒಂದೆರಡು ತಿಂಗಳು ವಿತರಣೆಯೇ ಆಗಲ್ಲ. ಈ ವರ್ಷವೂ ಮೂರು ತಿಂಗಳಿಂದ (ಏಪ್ರಿಲ್, ಮೇ, ಜೂನ್) ಟೆಂಡರ್ ಹಾಗೂ ಇತರ ಕಾರಣ ನೀಡಿ ಕಿಟ್ ಬಂದಿಲ್ಲ. ಹೀಗಾದರೆ ಈ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ಕಿಡಿಕಾರಿದರು.
ಈ ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಅಥವಾ ಟೆಂಡರ್ ಕರೆಯುವವರೆಗೆ ತಾತ್ಕಾಲಿಕವಾಗಿ ಆಹಾರ ಸಾಮಗ್ರಿಯನ್ನು ಜಿಲ್ಲಾಡಳಿತದಿಂದಲೇ ಖರೀದಿಸಿ ವಿತರಿಸಬೇಕು ಎಂದ ಅವರು, ಜನವರಿ, ಫೆಬ್ರವರಿಯಲ್ಲಿಯೂ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿ ವಿತರಣೆ ಮಾಡಿಲ್ಲ. ಏಪ್ರಿಲ್ ಹಾಗೂ ಮೇ ತಿಂಗಳು ಕೂಲಿ ಕೆಲಸವೂ ಸರಿಯಾಗಿ ದೊರಕದ ಕಾಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸಿ ಕಳೆದ ತಿಂಗಳು ಎಚ್.ಡಿ.ಕೋಟೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಇದುವರೆಗೆ ಬಗೆಹರಿದಿಲ್ಲ. ಸರ್ಕಾರಿ ಇಲಾಖೆಯ ಮೂಲಕ ನಿಯಮಿತವಾಗಿ ನಡೆಯಬೇಕಾದ ಕೆಲಸಕ್ಕೂ ಜಿಲ್ಲಾ ಕೇಂದ್ರಕ್ಕೆ ಬಂದು ಆದಿವಾಸಿ ಜನತೆ ಹೋರಾಡಬೇಕು ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಪ್ರಿಲ್, ಮೇ, ಜೂನ್ ತಿಂಗಳ ಪೌಷ್ಟಿಕ ಆಹಾರ ಸಾಮಗ್ರಿಯನ್ನು ಒಟ್ಟಿಗೆ ವಿತರಿಸಬೇಕು. ಅಕ್ಕಿ ಜತೆಗೆ ಹೆಚ್ಚುವರಿಯಾಗಿ ರಾಗಿಯನ್ನೂ ನೀಡಬೇಕು. ಆದಿವಾಸಿಗಳಿಗೆ ನೀಡುವ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಗುಣಮಟ್ಟದಲ್ಲಿ ವಿತರಿಸಿ ಹಾಗೂ ಟೆಂಡರ್, ಇತರ ಕಾರಣಕ್ಕೆ ತಡ ಮಾಡಿಕೊಡುವುದನ್ನು ತಡೆಗಟ್ಟಬೇಕು. ಕಳೆದ ಆರ್ಥಿಕ ವರ್ಷದಲ್ಲಿ ಬಾಕಿ ಉಳಿಸಿರುವ 2 ತಿಂಗಳ ಕಿಟ್ ವಿತರಣೆ ನೀಡಬೇಕು. ಜಿಲ್ಲೆಯ ಆದಿವಾಸಿ ಹಾಡಿಗಳಿಗೆ ಮನೆ, ಶೌಚಗೃಹ, ರಸ್ತೆ, ಕುಡಿಯುವ ನೀರು, ವಿದ್ಯುತ್ ಮೊದಲಾದ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಹರಳಹಳ್ಳಿ ಹಾಡಿ ಮಾದಮ್ಮ, ನಡಾಡಿ ಹಾಡಿಯ ಮಾದಮ್ಮ, ಚಿಕ್ಕೆರೆಯೂರು ಹಾಡಿಯ ಕುಮಾರಿ, ನಿಂಗಮ್ಮ, ಬಾವಲಿಹಾಡಿ ಮೀನಾಕ್ಷಿ, ನೆಮ್ಮನಹಳ್ಳಿ ಹಾಡಿ ಪ್ರಕಾಶ್, ಚಂದ್ರಕಲಾ, ಬಾವಿಕೆರೆ ಹಾಡಿಯ ರಮೇಶ್, ಸಂಘಟನೆಯ ಜಿಲ್ಲಾ ಸಂಚಾಲಕ ಸುನಿಲ್, ಎಸ್‌ಯುಸಿಐನ ಬಿ.ರವಿ, ಮಹಿಳಾ ಸಂಘಟನೆಯ ಪದಾಧಿಕಾರಿಗಳಾದ ಸೀಮಾ ಆಸಿಯಾ ಬೇಗಂ, ಪುಷ್ಪಾ, ಕಾರ್ಮಿಕ ಮುಖಂಡರಾದ ಎಂ.ಉಮಾದೇವಿ, ಶಿವಾನಂದ, ರೈತ ಮುಖಂಡರಾದ ಬಸವರಾಜ್ ಭಾಗವಹಿಸಿದ್ದರು.