ಹುಣಸೂರು ತಾಲೂಕು ಮಾದಯ್ಯನಕಟ್ಟೆ ಹಾಡಿಯಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಸಮುದಾಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ಡಾ.ಎಸ್.ಶ್ರೀಕಾಂತ್, ವಿಠಲ್ ನಾಣಾಚ್ಚಿ, ಶಿವಣ್ಣ, ಕಿರಣ್, ಡಾ.ಕೆ.ಮಧುಮಾಲಿನಿ ಇತರರಿದ್ದರು. 
ಮೈಸೂರು

ದುಶ್ಚಟಗಳಿಗೆ ಬಲಿಯಾಗುತ್ತಿದೆ ಆದಿವಾಸಿ ಯುವಸಮೂಹ

ಹುಣಸೂರು: ನಗರದ ಡೀಡ್ ಸಂಸ್ಥೆ ಮತ್ತು ಮೂಡುಬಿದರೆ ಆಳ್ವಾಸ್ ಕಾಲೇಜಿನ(ಸ್ವಾಯುತ್ತ) ಸಮಾಜ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ವಾರದ ಸಮಾಜ ಕಾರ್ಯ ಸಮುದಾಯ ಶಿಬಿರದ ಸಮಾರೋಪ ಸಮಾರಂಭ ತಾಲೂಕಿನ ಮಾದಯ್ಯನಕಟ್ಟೆ ಜೇನುಕುರುಬರ ಹಾಡಿಯಲ್ಲಿ ನಡೆಯಿತು.
ಶುಕ್ರವಾರ ಸಮಾರಂಭದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಶಿಬಿರಾರ್ಥಿ ಕಿರಣ್, ವಾರದ ಶಿಬಿರದಲ್ಲಿ ತಾಲೂಕಿನ ಹೆಮ್ಮಿಗೆ, ಕೊಳವಿಗೆ, ಭಾರತವಾಡಿ ಹಾಡಿಗಳಲ್ಲಿ ಆದಿವಾಸಿಗಳೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇವೆ. ಆದಿವಾಸಿಗಳು ಅತ್ತ ಕಾಡು ಇಲ್ಲದೆ ಇತ್ತ ಊರಿನಲ್ಲೂ ಇರಲಾದರೆ ಅತಂತ್ರ ಸ್ಥಿತಿ ತಲುಪಿದ್ದಾರೆ. ಆದಿವಾಸಿ ಯುವಸಮೂಹ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಅರಣ್ಯ ಹಕ್ಕು, ಪುನರ್ವಸತಿ, ಗುಣಮಟ್ಟದ ಶಿಕ್ಷಣ, ಸ್ವಯಂ ನಿರ್ಣಯ ಹಕ್ಕಿನ ಪೆಸಾ ಕಾಯ್ದೆ ಜಾರಿಗೊಳಿಸುವಲ್ಲಿ ಸರ್ಕಾರ ಕಾಳಜಿ ವಹಿಸದಿರುವುದು ಜನರಲ್ಲಿ ಅಸಮಾಧಾನ ಇರುವುದು ಗೋಚರವಾಗಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಗ್ರಾಮಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಮಹತ್ವ, ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಾಜ ಕಾರ್ಯಕರ್ತರ ಪಾತ್ರ, ಸಮಾನತೆಗಾಗಿ ನಡೆದ ದಲಿತ ಚಳವಳಿ, ಜೈವಿಕ ಇಂಧನದ ಪ್ರಾಮುಖ್ಯತೆ, ಜನತಂತ್ರ ಕುರಿತು ನೀಡಿದ ಮಾಹಿತಿ ಬಹುಯೋಗವಾಗಿದೆ. ಆದಿವಾಸಿಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಸಮಾಜ ಕಾರ್ಯ ವಿಭಾಗದ ವತಿಯಿಂದ ಮನವಿ ಸಲ್ಲಿಸಲಾಗುವುದೆಂದರು.
ಕಾರ್ಯಕ್ರಮದಲ್ಲಿ ಅರಣ್ಯ ಹಕ್ಕು, ಕುಡಿತ ಸಮಸ್ಯೆ ಕುರಿತ ಬೀದಿನಾಟಕ ಪ್ರದರ್ಶಿಸಲಾಯಿತು. ಹಕ್ಕುಗಳಿಗೆ ಸಂಬಂಧಿಸಿದ ಹಾಡುಗಳನ್ನು ವಿದ್ಯಾರ್ಥಿಗಳು ಹಾಗು ಆದಿವಾಸಿಗಳು ಹಾಡಿದರು. ಡೀಡ್ ಸಂಸ್ಥೆ ನಿರ್ದೇಶಕ ಡಾ. ಎಸ್.ಶ್ರೀಕಾಂತ್, ಪ್ರಾಧ್ಯಾಪಕರಾದ ಡಾ.ಕೆ.ಮಧುಮಾಲಿನಿ, ನಯೋಮಿ ರಿಯೋನಾ ಮೋರೆಸ್, ಆದಿವಾಸಿ ಮುಖಂಡರಾದ ವಿಠಲ್ ನಾಣಾಚ್ಚಿ, ಶಿವಣ್ಣ ಇತರರು ಪಾಲ್ಗೊಂಡಿದ್ದರು.