.ಹುಣಸೂರಿನಿಂದ ಮಾದಪ್ಪನ ಸನ್ನಿದಿಗೆ ಪಾದಯಾತ್ರೆಯಲ್ಲಿ ತೆರಳಿದ ನಟರಾಜ ಸ್ವಾಮೀಜಿ ಹಾಗೂ ಭಕ್ತವೃಂದ. 
ಮೈಸೂರು

ಮಲೆ ಮಹದೇಶ್ವರ ಬೆಟ್ಟ ತಲುಪಿದ ಪಾದಯಾತ್ರೆ

ಪ್ರಮುಖ ಮುಖ್ಯಾಂಶಗಳು

  • mm hills
ಹುಣಸೂರು: ತಾಲೂಕಿನ ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ನೇತೃತ್ವದಲ್ಲಿ ಜನರ ಕಲ್ಯಾಣಕ್ಕಾಗಿ ಆಯೋಜಿಸಿರುವ 10ನೇ ವರ್ಷದ ಬೆಟ್ಟದ ಬಳಗದ ಸೌಹಾರ್ದ ಪಾದಯಾತ್ರೆಯು 6ನೇ ದಿನಕ್ಕೆ ಕಾಲಿಟ್ಟಿದೆ.
ಜ.5ರಂದು ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಗಾವಡಗೆರೆಯ ಶ್ರೀಮಠದಲ್ಲಿ ಪೂಜಾ ಕೈಂಕರ್ಯ ನಡೆಸಿದ ನಂತರ ಪಾದಯಾತ್ರೆ ಆರಂಭಗೊಂಡಿತು. ಕೆ.ಆರ್.ನಗರ, ಮೈಸೂರು, ಟಿ.ನರಸೀಪುರ, ಕೊಳ್ಳೇಗಾಲ ಮಾರ್ಗವಾಗಿ ಹನೂರಿಗೆ ತಲುಪಿತು. ಅಲ್ಲಿಂದ ಶನಿವಾರ ತಾಳಬೆಟ್ಟ ತಲುಪಿದ್ದು, ಭಾನುವಾರ ಬೆಳಗ್ಗೆ ತಾಳಬೆಟ್ಟದಿಂದ ಹೊರಟು ಮಹದೇಶ್ವರನ ಸನ್ನಿಧಿಗೆ ತಲುಪಲಿದೆ. ಯಾತ್ರಿಗಳು ಮಲೆ ಮಹದೇಶ್ವರ ಸ್ವಾಮಿಯ ವಿಶೇಷ ಪೂಜೆ ಹಾಗೂ ಚಿನ್ನದ ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಸ್ವಾಮೀಜಿಗಳೊಂದಿಗೆ ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಕಣಗಾಲು ರಾಘು, ಸಣ್ಣನಿಂಗಪ್ಪ, ಬಸವರಾಜು, ಮಹದೇವು, ಶಿಲ್ಪ ಮಂಜುನಾಥ್ ಸೇರಿದಂತೆ ಕಣಗಾಲು ಗೆಳೆಯರ ಬಳಗದ ಸದಸ್ಯರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಜನಕಲ್ಯಾಣಕ್ಕಾಗಿ ಯಾತ್ರೆ: ಈ ವೇಳೆ ಮಾತನಾಡಿದ ಸ್ವಾಮೀಜಿಗಳು ಜನರ ಕಲ್ಯಾಣಕ್ಕಾಗಿ ಕಳೆದ 10 ವರ್ಷಗಳಿಂದ ಜನವರಿ ತಿಂಗಳಿನಲ್ಲಿ ಹುಣಸೂರು ತಾಲೂಕಿನಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸುತ್ತಿದ್ದೇವೆ. 200, 300 ಸಂಖ್ಯೆಯಿಂದ ಆರಂಭಗೊಳ್ಳುವ ಪಾದಯಾತ್ರೆಯಲ್ಲಿ ಹನೂರು, ತಾಳ ಬೆಟ್ಟಕ್ಕೆ ತೆರಳುವಷ್ಟರಲ್ಲಿ ಸಾಕಷ್ಟು ಮಂದಿ ಸೇರಿಕೊಳ್ಳುತ್ತಾರೆ. ಯಾತ್ರೆಯಿಂದ ಒಂದೆಡೆ ಭಕ್ತಿ, ಮತ್ತೊಂದೆಡೆ ದೇಹ ದಂಡಿಸುವ ಮೂಲಕ ಮನುಷ್ಯನಲ್ಲಿರುವ ದುರಾಸೆ ತೊಲಗಿ ಎಲ್ಲರಲ್ಲೂ ಧಾರ್ಮಿಕ ಭಾವನೆ ಮೂಡಲು ಸಹಕಾರಿಯಾಗಿದೆ ಎಂದರು. ಜತೆಗೆ ಯಾತ್ರಿಗಳಿಗೆ ಉಪಾಹಾರ, ದಾಸೋಹ, ಕುಡಿಯುವ ನೀರು, ರಾತ್ರಿ ಮಲಗಲು ವ್ಯವಸ್ಥೆ ಕಲ್ಪಿಸುವ ದಾನಿಗಳನ್ನು ಸ್ಮರಿಸಿದರು.