ಸರಗೂರು ತಾಲೂಕಿನ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಚಾಲಕ, ನಿರ್ವಾಹಕ ಅವರಿಗೆ ಸನ್ಮಾನ ಮಾಡಿದರು.
ಸರಗೂರು : ತಾಲೂಕಿನಿಂದ ಜಯಲಕ್ಷ್ಮೀಪುರ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮತ್ತು ಸಾರಿಗೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಗ್ರಾಮದ ಮುಖಂಡ ವೆಂಕಟರಾಮು ತಿಳಿಸಿದರು.
ಗ್ರಾಮಕ್ಕೆ ಬಂದ ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ದೊಡ್ಡ ಗ್ರಾಮಗಳ ಪೈಕಿ ಒಂದಾದ ಜಯಲಕ್ಷ್ಮೀಪುರಕ್ಕೆ ಸಾರಿಗೆ ಬಸ್ ವ್ಯವಸ್ಥೆಯೇ ಇರಲಿಲ್ಲ. ಇದರಿಂದ ಗ್ರಾಮದಿಂದ ವಿವಿಧ ಪಟ್ಟಣಕ್ಕೆ ಹೋಗುವಂತಹ ಸಾರ್ವಜನಿಕರು, ವಿದ್ಯಾಭ್ಯಾಸಕ್ಕೆ ಹೋಗುವಂತಹ ವಿದ್ಯಾರ್ಥಿಗಳಿಗೆ ಅನನುಕೂಲ ಉಂಟಾಗಿತ್ತು.
ನಮ್ಮ ಗ್ರಾಮದಿಂದ ಮೂಗತನಮೂಲೆವರೆಗೂ 3-4 ಕಿ.ಮೀ. ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಬಳಿಕ ಶಾಸಕ ಅನಿಲ್ ಚಿಕ್ಕಮಾದು ಅವರು ನಮ್ಮ ಮನವಿಗೆ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ಗ್ರಾಮಸ್ಥರ ಮನವಿ ಮೇರೆಗೆ ಎಚ್.ಡಿ.ಕೋಟೆ ಡಿಪೋದಿಂದ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ಸರಗೂರಿನಿಂದ ಜಯಲಕ್ಷ್ಮೀಪುರ ಮಾರ್ಗವಾಗಿ ಚಿಕ್ಕಬರಗಿ-ಮುತ್ತಿಗೆಹುಂಡಿ ಮಾರ್ಗವಾಗಿ ಅದೇ ಸರಗೂರಿಗೆ ತೆರಳಲು ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ನಾಲ್ಕು ಬಾರಿ ಸಂಚರಿಸಲಿವೆ. ಇದರಿಂದ ಗ್ರಾಮಸ್ಥರು ತಾಲೂಕು ಕೇಂದ್ರವಾದ ಸರಗೂರು, ಮೈಸೂರು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸಂಚರಿಸಲು ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಬಸ್ ಚಾಲಕ, ನಿರ್ವಾಹಕರನ್ನು ಅಭಿನಂದಿಸಲಾಯಿತು. ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದ್ದರು.