ಬಸವ ಬಳಗಗಳ ಒಕ್ಕೂಟ ವತಿಯಿಂದ ಬುಧವಾರ ಕುವೆಂಪುನಗರದಲ್ಲಿ ರಷ್ಯಾದ ಲೇಖಕಿ ಡಾ.ಗಲೀನ ಕೊಪೆಲಿಯೋವಿಚ್ ಹಾಗೂ ಮಾರ್ಗದರ್ಶಕ ಪ್ರೊ.ಎಚ್.ಎಸ್.ಹರಿಶಂಕರ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಕೆ.ಸಿ. ಶಿವಪ್ಪ, ಪ್ರೊ.ಎಂ. ಕೃಷ್ಣೇಗೌಡ ಹಾಗೂ ಇತರರು ಇದ್ದರು. 
ಮೈಸೂರು

ವಚನ ಸಾಹಿತ್ಯ ರಷ್ಯನ್ ಭಾಷೆಗೆ ಅನುವಾದ : ಲೇಖಕಿ ಡಾ.ಗಲೀನಗೆ ಮೈಸೂರಿನಲ್ಲಿ ಸನ್ಮಾನ

ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಸ್. ಹರಿಶಂಕರ್ ಮಾರ್ಗದರ್ಶನದಲ್ಲಿ 12ನೇ ಶತಮಾನದ ಸಮಾನತೆಯ ಹರಿಕಾರರಾದ ಬಸವಾದಿ ಶರಣರ ವಚನಗಳನ್ನ ರಷ್ಯನ್ ಭಾಷೆಗೆ ಅರ್ಥ ಸಹಿತ ಅನುವಾದಿಸಿ ವಚನ ಸಾಹಿತ್ಯವನ್ನು ವಿಶ್ವವ್ಯಾಪಿಗೊಳಿಸಿರುವ ರಷ್ಯಾದ ಲೇಖಕಿ ಡಾ.ಗಲೀನ ಕೊಪೆಲಿಯೋವಿಚ್ ಅವರನ್ನು ಬಸವ ಬಳಗಗಳ ಒಕ್ಕೂಟ ವತಿಯಿಂದ ಸನ್ಮಾನಿಸಲಾಯಿತು.
ಕುವೆಂಪುನಗರದಲ್ಲಿರುವ ಪ್ರೊ.ಎಚ್.ಎಸ್.ಹರಿಶಂಕರ್ ನಿವಾಸದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಪ್ರೊ.ಕೆ.ಸಿ. ಶಿವಪ್ಪ, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅವರು ಗಲೀನ ಅವರಿಗೆ ಶಾಲು, ಮೆಸೂರು ಪೇಟ ತೊಡಿಸಿ, ಫಲತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಅನುವಾದ ಸವಾಲಿನ ಕೆಲಸ. ಏಕೆಂದರೆ ಒಂದು ಭಾಷೆಯ ಪದಗಳಿಗೆ ಸಮನಾದ ಪದಗಳು ಮತ್ತೊಂದು ಭಾಷೆಯಲ್ಲಿ ಸಿಕ್ಕುವುದಿಲ್ಲ. ಇಂತಹ ಮಹತ್ವದ ಕೆಲಸವನ್ನು ಡಾ.ಗಲೀನ ಮಾಡಿರುವುದು ಶ್ಲಾಘನೀಯ ಎಂದರು.
ಇಂಗ್ಲಿಷ್‌ನವರು ಹೋದಕಡೆಯಲ್ಲ ತಮ್ಮ ಭಾಷೆಯನ್ನು ಪ್ರಚಾರ ಮಾಡಿದರು. ಆದ್ದರಿಂದಲೇ ಇಂಗ್ಲಿಷ್ ಭಾಷೆ ವ್ಯಾಪಕವಾಗಿ ಬೆಳೆದಿದೆ. ಆದರೆ ನಾವು ಕನ್ನಡವನ್ನು ಆ ರೀತಿ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ವಿಷಾದಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಸ್. ಹರಿಶಂಕರ್ ಮಾತನಾಡಿ, ಮುಂದೆ ಗಲೀನ ಅವರು ಕೆ.ಸಿ. ಶಿವಪ್ಪ ಅವರ ಮುದ್ದುರಾಮ ಚರಿತ ಚೌಪದಿಗಳನ್ನು ರಷ್ಯನ್ ಭಾಷೆಗೆ ಅನುವಾದಿಸುವ ಕೆಲಸ ಮಾಡುತ್ತಾರೆ ಎಂದರು.
ವಿಜ್ಞಾನ ಲೇಖಕ ಎಸ್. ರಾಮಪ್ರಸಾದ್ ಮಾತನಾಡಿ, ಗಲೀನ ಅವರು ಅಕ್ಕಮಹಾದೇವಿ ಅವರ ವಚನಗಳನ್ನು ಕೂಡ ರಷ್ಯನ್ ಭಾಷೆಗೆ ಅನುವಾದಿಸಬೇಕು ಎಂದರು.
ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಏ.19 ಮತ್ತು 20 ರಂದು ಕಲಾಮಂದಿರದಲ್ಲಿ ಅದ್ಧೂರಿಯಾಗಿ ನಡೆಯುವ ಬಸವ ಜಯಂತಿಯಲ್ಲಿ ಗಲೀನ ಅವರನ್ನು ಸನ್ಮಾನಿಸುವ ಉದ್ದೇಶ ಇತ್ತು. ಆದರೆ ಅವರು ನಾಳೆಯೇ ರಷ್ಯಾಗೆ ತೆರಳುತ್ತಿರುವುದರಿಂದ ಡಾ.ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಜಯಂತಿಯ ದಿನವಾದ ಇವತ್ತು ಅಭಿನಂದಿಸಲಾಗುತ್ತಿದೆ ಎಂದರು.
ಲೇಖಕಿ ಡಾ.ಗಲೀನ ಕೊಪೆಲಿಯೋವಿಚ್ ಮಾತನಾಡಿ, ನಾನು ಫ್ಯಾಷನ್‌ಗೆ ಕನ್ನಡವನ್ನು ಕಲಿತು ನಂತರ ಶರಣರ ವಚನಗಳ ಮಹತ್ವ ಅರಿತು ರಷ್ಯನ್ ಭಾಷೆಗೆ ಅನುವಾದಿಸಿದ್ದೇನೆ. ಇದಕ್ಕೆ ಪ್ರೊ.ಎಚ್.ಎಸ್. ಹರಿಶಂಕರ್ ಅವರ ಮಾರ್ಗದರ್ಶನ ಕಾರಣ. ಇವತ್ತು ರಷ್ಯಾದಲ್ಲಿ ಈ ಕೃತಿ ಬಿಡುಗಡೆಯಾಗಿದೆ. ಮತ್ತಷ್ಟು ಕೃತಿಗಳನ್ನು ಅನುವಾದಿಸುತ್ತೇನೆ ಎಂದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಮೈಸೂರು ತಾಲೂಕು ಅಧ್ಯಕ್ಷ ದೇವರಾಜ ಪಿ. ಚಿಕ್ಕಹಳ್ಳಿ, ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಶಿವಮೂರ್ತಿ ಕಾನ್ಯ, ಬಸವ ಬಳಗಗಳ ಒಕ್ಕೂಟದ ಪದಾಧಿಕಾರಿಗಳಾದ ಎ.ಪಿ. ವಿರೂಪಾಕ್ಷ, ಜಯಶಂಕರ್, ಬಿ.ಆರ್. ಶಿವಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹಾಗೂ ಇತರರು ಇದ್ದರು.