ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ  
ಮೈಸೂರು

ನಂಜನಗೂಡು ಹಳೇ ಸೇತುವೆಯಲ್ಲಿ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧ

ಮೈಸೂರು: ನಂಜನಗೂಡು ಪಟ್ಟಣದ ಬಳಿ ಕಬಿನಿ ನದಿ ಹಳೇ ಸೇತುವೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಹಳೇ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ನಂಜನಗೂಡಿನಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಎರಡು ಪ್ರಮುಖ ಸೇತುವೆಗಳಿದ್ದು, ಒಂದು ಸೇತುವೆ (ಎರಡು ಸೇತುವೆಗಳಲ್ಲಿ) ಹಳೇ ಸೇತುವೆಯಾಗಿದೆ ಮತ್ತು ಇನ್ನೊಂದು ಹೊಸದಾಗಿ ನಿರ್ಮಿಸಲಾದ ಸಮಾನಾಂತರ ಸೇತುವೆಯಾಗಿದೆ. ಮೈಸೂರಿನಿಂದ ನಂಜನಗೂಡು ಕಡೆಗೆ ಸಂಚಾರ ಹೊಸದಾಗಿ ನಿರ್ಮಿಸಲಾದ ಸೇತುವೆ ಮೇಲೆ ಮತ್ತು ನಂಜನಗೂಡಿನಿಂದ ಮೈಸೂರು ಕಡೆಗೆ ಸಂಚಾರ ಹಳೆಯ ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ.
ಹಳೆಯ ಸೇತುವೆ ಶಿಥಿಲವಾಗಿದ್ದು, ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ವಾಹನಗಳ ಸಂಚಾರವನ್ನು ಹಳೆಯ ಸೇತುವೆಯಿಂದ ಹೊಸದಾಗಿ ನಿರ್ಮಿಸಲಾದ ಸೇತುವೆಗೆ ತಾತ್ಕಾಲಿಕವಾಗಿ ಬದಲಾಯಿಸಿ ಆದೇಶ ಹೊರಡಿಸಲಾಗಿದೆ.