ತಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಮುಖ್ಯ ರಸ್ತೆಯ ನಡುವೆಯೇ ಕೆಎಸ್‌ಆರ್‌ಟಿಸಿ ಬಸ್ ಹತ್ತಲು ಮುಗಿಬಿದ್ದಿರುವ ಜನರು.  
ಮೈಸೂರು

ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ವಿಳಂಬ

ಎ. ಆರ್. ರಘುರಾಮ
ಮಹೇಂದ್ರ ಪೂರೀಗಾಲಿ
ತಿ.ನರಸೀಪುರ : ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸಲು ಹಾಗೂ ಸಂಚಾರ ನಿಯಂತ್ರಿಸಲು ಕಣ್ಗಾವಲು ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಕುಂಟುತ್ತಲೇ ಸಾಗಿದೆ.
ಪುರಸಭೆ ಅನುದಾನದಿಂದ ಪಟ್ಟಣದಾದ್ಯಂತ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಹಲವು ತಿಂಗಳಿನಿಂದ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ಪೂರ್ಣಗೊಳ್ಳದ ಕಾರಣ ಜನದಟ್ಟಣೆ, ವಾಹನಗಳ ಅಡ್ಡಾದಿಡ್ಡಿ ನಿಲುಗಡೆ, ಸಂಚಾರ ಸಿಕ್ಕು, ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಕಾರ್ಯ ಪೊಲೀಸರಿಗೆ ಹರಸಾಹಸವಾಗಿದೆ. ಆಧುನಿಕ ವ್ಯವಸ್ಥೆ ಸಂಪೂರ್ಣ ಜಾರಿಗೆ ಬಂದರೆ ಪಟ್ಟಣದ ವಿವಿಧ ವೃತ್ತಗಳ ವಾಹನ ಸಂಚಾರ ಮತ್ತು ಸಿಗ್ನಲ್ ಜಂಪ್ ಮಾಡುವವರನ್ನು ಪೊಲೀಸರು ನಿಯಂತ್ರಣ ಕೊಠಡಿಯಲ್ಲೇ ಟಿವಿ ಪರದೆಮೇಲೆ ವೀಕ್ಷಿಸಿ ಧ್ವನಿ ಸಂದೇಶದ ನೀಡುವ ಮತ್ತು ದಂಡ ವಿಧಿಸುವ ಕ್ರಮವನ್ನು ಜಾರಿಗೆ ತರಬಹುದು. ಇದರಿಂದ ನಿಯಮಪಾಲನೆಗೆ ಬಿಗಿತನ ಬರುವುದಲ್ಲದೇ ಅಪಘಾತಗಳ ತಡೆ ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಪಟ್ಟಣದ ಜನ ವಸತಿ ಪ್ರದೇಶಕ್ಕೆ ತಕ್ಕಂತೆ ಇಲ್ಲಿನ ರಸ್ತೆಗಳ ವಿಸ್ತರಣೆಯಾಗಿಲ್ಲ. ಅಲ್ಲಿನ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಜನದಟ್ಟಣೆಯ ಜೊತೆಗೆ ವಾಹನಗಳ ಸಂಖ್ಯೆ ಮತ್ತು ಸಂಚಾರವೂ ಮಿತಿ ಮೀರಿದೆ. ಇದರ ಪರಿಣಾಮವಾಗಿ ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಸಂಚಾರ ನಿಯಂತ್ರಣ ಸಮಸ್ಯೆಯಾಗಿ ಪರಿಣಮಿಸಿದೆ. ಪೊಲೀಸ್ ಸಿಬ್ಬಂದಿ ಸಂಖ್ಯೆಯೂ ಜನಸಂಖ್ಯೆಗೆ ಅನುಗುಣವಾಗಿ ಇಲ್ಲದಿರುವುದೂ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ತಿ.ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ ಅವರು ಯೋಜನಾ ವರದಿ ಸಿದ್ಧಪಡಿಸಿ ಅನುದಾನ ಕೋರಿ ಪುರಸಭೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಮಹಾನಗರಗಳಲ್ಲಿ ಜಾರಿಯಲ್ಲಿರುವಂತೆ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಯೋಜನೆ ಅನುಷ್ಠಾನ ಮಾಡಲು ಪೊಲೀಸ್ ಇಲಾಖೆ ಆಶಯದಂತೆ ಅನುದಾನವೂ ಮಂಜೂರಾಯಿತು. ಪುರಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಅಡಳಿತವಿದ್ದಾಗಲೇ 15 ಲಕ್ಷ ರೂಗಳನ್ನು ಈ ಯೋಜನೆಗಾಗಿ ಬಿಡುಗಡೆ ಮಾಡಿ ವರ್ಷಗಳೇ ಕಳೆದಿದೆ. ಪುರಸಭೆ ಅಧಿಕಾರಿಗಳು ಟೆಂಡರ್ ಕರೆದು ಸಿಸಿ ಕ್ಯಾಮರಾ ಅಳವಡಿಕೆಗೆ ಗುತ್ತಿಗೆ ನೀಡಿ ಹಲವು ತಿಂಗಳು ಕಳೆದಿವೆ. ಆದರೂ ಗುತ್ತಿಗೆದಾರರು ವಹಿಸಿಕೊಂಡಿದ್ದ
ಜವಾಬ್ದಾರಿಯುತ ಕೆಲಸವನ್ನು ಪೂರ್ಣಗೊಳಿಸಿಲ್ಲ. ಉದ್ದೇಶಿತ 15 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡುತ್ತಿರುವ ಕಾಮಗಾರಿಯು ಅರೆಬರೆ ಸ್ಥಿತಿಯಲ್ಲಿದೆ. ಒಂದೆರಡು ಕಡೆ ಮಾತ್ರ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿದೆ. ಇನ್ನುಳಿದ ಕಡೆ ಕೆಲಸವು ನಿರ್ಲಕ್ಷೃಕ್ಕೆ ಒಳಗಾಗಿದೆ.
**
ಕಾಡುತ್ತಿದೆ ಗೊಂದಲ:
ಪಟ್ಟಣದಲ್ಲಿ ಅಳವಡಿಸುತ್ತಿರುವ ಸಿಸಿ ಕ್ಯಾಮರಾಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಈಗಾಗಲೇ ಕಾಲೇಜು ವೃತ್ತದ ಬಳಿ, ಕಾಲೇಜು ರಸ್ತೆ ಮತ್ತು ನಂಜನಗೂಡು ರಸ್ತೆಯಲ್ಲಿ ಮತ್ತು ಹಳೇ ಸಂತೇಮಾಳ ವೃತ್ತದಲ್ಲಿರುವ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮರಾಗಳು ಸಂಚಾರ ನಿಯಮಗಳ ಉಲ್ಲಂಘನೆ ಮೇಲೆ ನಿಗಾ ಇರಿಸಿ ಪ್ರಾಯೋಗಿಕವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತಿವೆ.
ಇವುಗಳ ಕಾರ್ಯವೈಖರಿ ಏನು ಎಂಬ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿಗಳೂ ಇಲ್ಲ. ಅರಿವೂ ಇಲ್ಲ. ಈ ಬಗ್ಗೆ ಪುರಸಭೆ ಅಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ಯಾವುದೇ
ಜಾಗೃತಿ ಕಾರ್ಯಗಳನ್ನೂ ಈವರೆಗೆ ನಡೆಸಿಲ್ಲ. ಪಟ್ಟಣದಲ್ಲಿ ಸಂಚಾರ ನಿಯಮಗಳ ಪಾಲನೆ ಮತ್ತು ವಾಹನಗಳ ಕ್ರಮಬದ್ಧ ಸಂಚಾರದ ಬಗ್ಗೆ ಹಿಂದಿನಿಂದಲೂ ಜಿಜ್ಞಾಸೆಯಿದೆ. ಕಿರಿದಾದ ರಸ್ತೆಗಳ ಬದಿಯನ್ನು ಕಾರು, ಆಟೋರಿಕ್ಷಾ ನಿಲುಗಡೆಗೆ ಹಾಗೂ ವ್ಯಾಪಾರಿಗಳು ತಮ್ಮ ತಮ್ಮ ವಹಿವಾಟುಗಳಿಗೆ ಅತಿಕ್ರಮಿಸಿ ಕೊಂಡಿದ್ದಾರೆ. ಈ ನಡುವೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸಣ್ಣ ಪುಟ್ಟ ವಾಹನ ಸವಾರರಿಗೆ ದಂಡದ ಬರೆಯಾಗಿ ಪರಿಣಮಿಸಿದೆಯೇ ಹೊರತು ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಿಲ್ಲ. ಇದೀಗ ಸಿಸಿ ಕ್ಯಾಮರಾ ಅಳವಡಿಕೆ ಬಳಿಕವೂ ನಿರ್ವಹಣೆಯ ಹೊಣೆ ಪೊಲೀಸರದ್ದೇ ಆಗಿದೆ. ಹಾಗಾಗಿ ಈ ಬಗ್ಗೆ ನಾಗರಿಕರಿಗೆ ಸ್ಪಷ್ಟ ಸೂಚನೆಗಳನ್ನು ಪೊಲೀಸರೇ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
**
ಬಗೆಹರಿಯದ ಸಂಚಾರ ಸಮಸ್ಯೆಗಳು
ಗ್ರಾಮ, ಪಟ್ಟಣ ಪ್ರದೇಶದಿಂದ ಸಮ್ಮಿಳಿತಗೊಂಡಿರುವ ತಿ.ನರಸೀಪುರ ಪಟ್ಟಣವು ತಾಲೂಕು ಕೇಂದ್ರವಾಗಿದೆ. ನೆರೆಯ ನಂಜನಗೂಡು ಸೇರಿದಂತೆ ಚಾ ನಗರ, ಕೊಳ್ಳೇಗಾಲ, ಮಳವಳ್ಳಿ ಹಾಗೂ ಮೈಸೂರು ತಾಲೂಕಿನ ಗಡಿ ಗ್ರಾಮಗಳ ಜನರು ನಿತ್ಯವೂ ಪಟ್ಟಣಕ್ಕೆ ಬರುವುದರಿಂದ ಜನ ದಟ್ಟಣೆ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತಿಲ್ಲ. ಖಾಸಗಿ ಬಸ್ ನಿಲ್ದಾಣದ ಬಳಿ ರಸ್ತೆಗಳಲ್ಲಿ ನಿಲ್ಲುವ ಬಸ್ಸುಗಳನ್ನು ಜನರು ಹತ್ತುವುದು, ಇಳಿಯುವುದು ಸಾಮಾನ್ಯವಾಗಿದೆ. ಇಲ್ಲಿ ಯಾವುದೇ ಸಂಚಾರ ನಿಯಮ ಇಲ್ಲವಾಗಿದೆ. ಇದರಿಂದ ಬಸ್ಸು ಹೊರಡುವವರೆಗೂ ಅವುಗಳ ಹಿಂದೆ ಹತ್ತಾರು ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ರಸ್ತೆಯಲ್ಲೇ ಬಸ್ ಹತ್ತಲು ನಿಲ್ಲುವುದು ಸಾಮಾನ್ಯವಾಗಿದೆ. ಸಿಸಿ
ಕ್ಯಾಮರಾಗಳು ಕಾರ್ಯ ಆರಂಭಿಸಿದರೆ ಇಂತಹ ಸಮಸ್ಯೆಗಳಿಗೆ ಮಂಗಳ ಹಾಡಬಹುದು. ಸಂಚಾರವೂ ಆಗ ಸುಗಮಗೊಳ್ಳಲಿದೆ ಎಂಬುದು ಜನರ ಆಶಯ
*
ಕೋಟ್
ಪಟ್ಟಣದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಕಾನೂನು ಸುವ್ಯವಸ್ಥೆ ಪಾಲನೆ ಮತ್ತು ಸಂಚಾರ ನಿಯಂತ್ರಣ ಉದ್ದೇಶದಿಂದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಪುರಸಭೆ ಅನುದಾನದಲ್ಲಿ ಸಿಸಿಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅವುಗಳ ಕಾರ್ಯಕ್ಷಮತೆ ಪರೀಕ್ಷಿಸಿದ ನಂತರ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುತ್ತೇವೆ.
ಧನಂಜಯ
ಪೊಲೀಸ್ ಇನ್ಸ್ ಪೆಕ್ಟರ್, ತಿ.ನರಸೀಪುರ ಪೊಲೀಸ್ ಠಾಣೆ
*
ಜನದಟ್ಟಣೆ ಮತ್ತು ಸಂಚಾರ ನಿಯಂತ್ರಣದ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಅಳವಡಿಕೆ ಯೋಜನೆಯನ್ನು ಪೊಲೀಸ್ ಇಲಾಖೆ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಪುರಸಭೆಯಿಂದ ಅನುದಾನ ಕೊಟ್ಟಿದ್ದೇವೆ. ಎರಡು ತಿಂಗಳಿನಿಂದ ಪಟ್ಟಣದ ವಿವಿಧ ವೃತ್ತ ಮತ್ತು ಪ್ರಮುಖ ಮಾರ್ಗಗಳಲ್ಲಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಕ್ಯಾಮರಾಗಳನ್ನು ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇವೆ.
ಸಿ. ಶ್ರೀನಿವಾಸ್
ಪುರಸಭೆ ಮುಖ್ಯಾಧಿಕಾರಿ, ತಿ.ನರಸೀಪುರ