ಅಗ್ನಿ ಸುರಕ್ಷತೆ ಕುರಿತು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ನಗರದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದರು. 
ಮೈಸೂರು

ಅಗ್ನಿ ಸುರಕ್ಷತೆ ಇಲ್ಲದಿದ್ದರೆ ಟ್ರೇಡ್ ಲೈಸೆನ್ಸ್ ರದ್ದು

ಪ್ರಮುಖ ಮುಖ್ಯಾಂಶಗಳು

  • ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಎಚ್ಚರಿಕೆ
  • ಡಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ
ಮೈಸೂರು: ಜಿಲ್ಲೆಯಲ್ಲಿ ಎರಡು ಅಥವಾ ಮೂರನೇ ಅಂತಸ್ತಿನಲ್ಲಿ ತಾತ್ಕಾಲಿಕವಾಗಿ ಕಟ್ಟಡ ನಿರ್ಮಿಸಿಕೊಂಡು ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳದೆ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ, ವಾರದೊಳಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ದಟ್ಟಗಳ್ಳಿಯಲ್ಲಿ ರೆಸ್ಟೋರೆಂಟ್‌ನಲ್ಲಿ ಇತ್ತೀಚೆಗೆ ನಡೆದ ಅಗ್ನಿ ದುರಂತವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.
ಅಗ್ನಿ ದುರಂತಗಳು ಹೇಳಿ ಬರುವುದಿಲ್ಲ. ರೂಫ್ ಟಾಪ್ ಪಬ್, ರೆಸ್ಟೋರೆಂಟ್‌ಗಳಲ್ಲಿ ಹುಲ್ಲು, ಅಲಂಕಾರಿಕ ವಿದ್ಯುತ್ ದೀಪ ಬಳಸಲಾಗುತ್ತಿದೆ. ಜತೆಗೆ, ಯಾವುದೇ ಅಗ್ನಿ ಸುರಕ್ಷತಾ ಕ್ರಮವನ್ನೂ ಕೈಗೊಂಡಿರುವುದಿಲ್ಲ. ಮೈಸೂರು ಮಹಾನಗರ ಪಾಲಿಕೆ ವಲಯ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಒಂದು ವಾರದೊಳಗೆ ಪರಿಶೀಲನೆ ನಡೆಸಬೇಕು. ಲೋಪವಾಗಿದ್ದರೆ ಟ್ರೇಡ್ ಲೈಸೆನ್ಸ್ ರದ್ದು ಪಡಿಸಬೇಕು ಎಂದು ತಾಕೀತು ಮಾಡಿದರು.
ಅಬಕಾರಿ ಇಲಾಖೆಯಿಂದ ಸಿ.ಎಲ್-7, ಸಿ.ಎಲ್-2, ಸಿ.ಎಲ್-5 ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುವುದು, ಜತೆಗೆ, ಪರವಾನಗಿ ಪಡೆದ ರೀತಿ ಕಾರ್ಯನಿರ್ವಹಿಸದೇ ಇರುವ ಬಾರ್, ಪಬ್‌ಗಳು ಮೈಸೂರು ನಗರ ಹಾಗೂ ನಗರದ ಹೊರ ವಲಯದಲ್ಲಿ ನಡೆಯುತ್ತಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದರು.
ಅಬಕಾರಿ ಇಲಾಖೆ ನಿಯಮದ ಪ್ರಕಾರ ಪರವಾನಗಿ ಪಡೆಯದೇ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಆನ್‌ಲೈನ್‌ನಲ್ಲೇ ಮದ್ಯ ಮಾರಾಟ ಕುರಿತು ಜಾಹೀರಾತು ನೀಡುತ್ತಿವೆ. ಜಾಹೀರಾತು ಫಲಕಗಳಲ್ಲಿ ಪ್ರಚಾರ ನೀಡುತ್ತಿರುವುದು ಕಂಡುಬಂದಿದ್ದು, ಅಧಿಕಾರಿಗಳು ಕೂಡಲೇ ನಿಯಮಾನುಸಾರ ಕ್ರಮ ವಹಿಸಬೇಕು ಎಂದೂ ಸೂಚಿಸಿದರು
ಪರವಾನಗಿ ನೀಡುವ ಸಂದರ್ಭದಲ್ಲಿ ಅಗ್ನಿ ಸುರಕ್ಷತೆ ಕುರಿತು ತಿಳಿದುಕೊಳ್ಳಬೇಕಿದ್ದು, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅಬಕಾರಿ ಇಲಾಖೆಯಿಂದ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಅಗ್ನಿ ಸುರಕ್ಷತಾ ಕ್ರಮಗಳು ಇಲ್ಲದಿದ್ದಲ್ಲಿ ಪರವಾನಗಾಗಿ ಅರ್ಜಿ ಬಂದ ಸಂದರ್ಭದಲ್ಲೇ ರದ್ದು ಮಾಡಬೇಕು ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಅಬಕಾರಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ಮಾಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಹೋಂಸ್ಟೆ, ರಿಂಗ್ ರಸ್ತೆಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟದ ಸಾಧ್ಯತೆ ಇರುತ್ತದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಅಗ್ನಿಶಾಮಕ ಅಧಿಕಾರಿ ಗುರುರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.