ಚುಂಚನಕಟ್ಟೆ ಶ್ರೀ ಕೋದಂಡರಾಮ ದೇವಸ್ಥಾನದ ಬಳಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ 
ಮೈಸೂರು

ಕಾವೇರಿ ಭೋರ್ಗರೆತಕ್ಕೆ ಪ್ರವಾಸಿಗರು ಫಿದಾ

ಸಾಲಿಗ್ರಾಮ :

ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಶ್ರೀ ಕೋದಂಡರಾಮ ದೇವಸ್ಥಾನದ ಬಳಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ತುಂತುರು ಮಳೆಯಲ್ಲಿ ಪ್ರಕೃತಿ ಸೊಬಗಿನ ಭೋರ್ಗರೆದು ಧುಮ್ಮಿಕ್ಕುತ್ತಿರುವ ಜಲಧಾರೆ ಕಣ್ತುಂಬಿಕೊಳ್ಳಲು ಪ್ರವಾಸಿದರು ಮುಗಿ ಬೀಳುತ್ತಿದ್ದಾರೆ.
ತಲಕಾವೇರಿಯಲ್ಲಿ ಹುಟ್ಟಿ ಕೊಡಗಿನ ಮಾರ್ಗವಾಗಿ ಚುಂಚನಕಟ್ಟೆ ಸುಂದರ ಫಾಲ್ಸ್‌ನಲ್ಲಿ ಬಂಡೆಯೊಳಗಿನಿಂದ ಈಗ ಸುಮಾರು 40 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುವ ಮೂಲಕ ಹಾಲಿನ ಬಿಳಿ ನೊರೆಯಂತೆ ಇಡೀ ನದಿ ಹರಿಯುತ್ತಿದೆ. ನದಿಯ ಎಡ ಮತ್ತು ಬಲಭಾಗದಲ್ಲಿ ಹಸುರಿನ ಸಿರಿ ನಡುವೆ ಹರಿಯುವ ದೃಶ್ಯ ಪ್ರತಿಯೊಬ್ಬರ ಮನಸೆಳೆಯುವಂತೆ ಮಾಡುತ್ತದೆ. ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಕಾವೇರಿ ನದಿ(ಚುಂಚನಕಟ್ಟೆ ಫಾಲ್ಸ್)ನೋಡಲು ಜನರು ಆಗಮಿಸುತ್ತಾರೆ.
ಜನತೆ ಕುಟುಂಬ ಸಮೇತರಾಗಿ ಹಾಗೂ ನವಜೋಡಿಗಳು, ಯುವಕ-ಯುವತಿಯರು ನದಿ ಸೊಬಗು ವೀಕ್ಷಣೆಗೆ ಆಗಮಿಸುತ್ತಿರುವುದು ಸ್ಥಳೀಯ ಜನರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲೂ ಸೆಲ್ಫಿ ಹಾಗೂ ಜಲಪಾತದ ಸುಂದರ ದೃಶ್ಯಗಳು ನಿತ್ಯವೂ ಹರಿದಾಡುತ್ತಿರುವುದರಿಂದ ದಿನೇ ದಿನೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಚುಂಚನಕಟ್ಟೆ ಸಾಲಿಗ್ರಾಮ ಮುಖ್ಯರಸ್ತೆಯ ಕಾವೇರಿ ಸೇತುವೆ ಬಲಭಾಗದ ಧನುಷ್ಕೋಟಿಯಲ್ಲಿ ಕಾವೇರಿ ನದಿ ರಭಸವಾಗಿ ಮೈದುಂಬಿ ಹರಿದು ಸುಮಾರು 60 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

2019ರಲ್ಲಿ 55 ಸಾವಿರ ಕ್ಯೂಸೆಕ್ ನೀರು ಕಾವೇರಿ ನದಿಯಲ್ಲಿ ಹರಿದಿತ್ತು. ಆಗ ನದಿ ಬಳಿ ಇರುವ ಗ್ರಾಮಗಳಲ್ಲಿ ಆತಂಕ ಮೂಡಿಸಿತ್ತು. ಕಳೆದ ವರ್ಷ ಜುಲೈನಲ್ಲಿ 45 ಸಾವಿರ ಕ್ಯೂಸೆಕ್ ನೀರು ಹರಿದಿತ್ತು. ಆದರೆ ಕೊಡಗಿನಲ್ಲಿ ಮಳೆ ಪ್ರಮಾಣವೇ ಕಡಿಮೆಯಾಗಿರುವ ಜುಲೈನಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿತ್ತು. ವಾರದಿಂದ ಕೊಡಗಿನಲ್ಲಿ ಮಳೆ ಸುರಿಯುತ್ತಿರುವುದರಿಂದ ನದಿ ಹರಿವಿನ ನೀರಿನ ಪ್ರಮಾಣ ಹೆಚ್ಚಾಗಿದೆ.
ಪ್ರವಾಸಿಗರಿಗೆ ಬೇಕಿದೆ ಸೌಲಭ್ಯ:
ಚುಂಚನಕಟ್ಟೆ ನೀರಿನ ಫಾಲ್ಸ್ ನೋಡಲು ಜನ ಸಾಗರವೇ ಹರಿದು ಬರುತ್ತಿದೆ. ಆದರೆ ಸುಂದರ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.
ಜಲಪಾತ ವೀಕ್ಷಿಸಲು ಕಾಲೇಜು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ ಸೆಲ್ಫಿ ಹುಚ್ಚಾಟಗಳು ಹೆಚ್ಚಾಗಿವೆ. ಇದರ ಬಗ್ಗೆ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕಿದೆ. ಇಲ್ಲದಿದ್ದರೆ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ.

ವಾಚ್ ಟವರ್, ರೂಂಗಳು, ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲು ಎಲ್ಲ ಅನುಕೂಲಗಳಿದ್ದರೂ ಪ್ರಸೋದ್ಯಮ ಇಲಾಖೆಯ ನಿರ್ಲಕ್ಷೃದಿಂದ ಕಾರ್ಯಗತವಾಗಿಲ್ಲ . ಇದರಿಂದ ಪ್ರವಾಸಿಗರಿಗೆ ಇರುವ ಸೌಲಭ್ಯಗಳು ಬಳಕೆಗೆ ಬಾರದಂತಾಗಿವೆ. ಇಲಾಖೆಗೂ ಆದಾಯ ಬಾರದಂತಾಗಿದೆ. ಶೌಚಗೃಹ, ಕ್ಯಾಂಟೀನ್ ಹಾಗೂ ರೂಂಗಳು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಪ್ರವಾಸೋದ್ಯಮ ಇಲಾಖೆಗೆ ಆದಾಯ ಹೆಚ್ಚಾಗುತ್ತದೆ. ಆದರೆ ಸರ್ಕಾರ ಚುಂಚನಕಟ್ಟೆ ಫಾಲ್ಸ್ ಅಭಿವೃದ್ಧಿಗೆ ನಿರ್ಲಕ್ಷ ವಹಿಸಿದೆ.

2019ರಲ್ಲಿ 78 ಲಕ್ಷ ರೂ. ವೆಚ್ಚದಲ್ಲಿ ಚುಂಚನಕಟ್ಟೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹಣ ಮಂಜೂರಾಗಿದ್ದು, ಕಾಮಗಾರಿಯೂ ಮುಗಿದಿದೆ. ಆದರೆ ನಿರ್ವಹಣೆ ಇಲ್ಲದೆ ಸರ್ಕಾರದ ಹಣ ಪೋಲಾದಂತಾಗಿದೆ.