ತಿ.ನರಸೀಪುರದ ಹಳೇ ಸಂತೆ ಮಾಳದ ಬಳಿ ಮಂಗಳವಾರ ಪುರಸಭೆ ನಾಮ ನಿರ್ದೇಶಿತ ಸದಸ್ಯರೊಬ್ಬರು ಸರ್ಕಾರಿ ತೋಪು ಜಾಗವನ್ನು ಅತಿಕ್ರಮಿಸಿಕೊಂಡು, ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿಕೊಂಡಿರುವ ಬಗ್ಗೆ ರೈತರು ಪ್ರತಿಭಟಿಸಿದರು. ಮುಖಂಡರಾದ ಮಹದೇವಸ್ವಾಮಿ, ಪುಟ್ಟಮಾದೇಗೌಡ, ಸುಂದರಮ್ಮ, ಉಮೇಶ್, ನಂಜುಡಸ್ವಾಮಿ, ಮಲ್ಲಯ್ಯ ಇತರರು ಇದ್ದರು. 
ಮೈಸೂರು

ತೋಪಿನ ನಿವೇಶನ ಅತಿಕ್ರಮಣ

ಎ. ಆರ್. ರಘುರಾಮ
ತಿ.ನರಸೀಪುರ : ಪಟ್ಟಣದ ಹಳೇ ಸಂತೆಮಾಳದ ಬಳಿ ಹೆಮ್ಮಿಗೆ ಮುಖ್ಯ ರಸ್ತೆ ಬದಿಯಲ್ಲಿರುವ ರೈತರ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದ ತೋಪಿನ ನಿವೇಶನವನ್ನು ಪುರಸಭೆ ನಾಮ ನಿರ್ದೇಶಿತ ಸದಸ್ಯರೊಬ್ಬರು ಸಚಿವ, ಸಂಸದರ ಹೆಸರು ಹೇಳಿಕೊಂಡು ಅತಿಕ್ರಮಿಸಿದ್ದಾರೆಂದು ನಿವಾಸಿಗಳು, ರೈತರು ದೂರಿದ್ದಾರೆ.
ಪಟ್ಟಣದ ಆಲಗೂಡು ಸರ್ವೇ ನಂಬರ್ 76 ರಲ್ಲಿರುವ 19 ಕುಂಟೆ ಸರ್ಕಾರಿ ತೋಪಿನ ನಿವೇಶನವನ್ನು ಅತಿಕ್ರಮಿಸಲಾಗಿದೆ ಎಂಬುದು ಕೃಷಿಕರ ಆರೋಪ.
ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ನಿವಾಸಿಗಳು ಕೃಷಿ ಚಟುವಟಿಕೆಗಳನ್ನು ನಡೆಸಲು ಈ ಜಾಗವನ್ನು ಮೀಸಲಾಗಿರಿಸಲಾಗಿದೆ. ಇದನ್ನು ಸಬೀಲ್ ಖಾನ್ ಎಂಬವರು ಒತ್ತುವರಿ ಮಾಡಿಕೊಂಡು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ರೈತ ಮಹದೇವಸ್ವಾಮಿ, ಹತ್ತಾರು ದಶಕಗಳಿಂದ ಕೃಷಿಯನ್ನು ನಂಬಿಕೊಂಡು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದೇವೆ.
ತೋಪು ಜಾಗವನ್ನು ರೈತರು ಹಲವು ವರ್ಷಗಳಿಂದ ಸಂಚಾರ ಮಾರ್ಗವಾಗಿ ಮತ್ತು ಒಕ್ಕಣೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ.
ಈ ನಿವೇಶನವನ್ನು ಸಬೀಲ್ ಖಾನ್ ಅವರು ಅತಿಕ್ರಮಿಸಿ, ರೈತರ ಜಮೀನಿಗೆ ಹೋಗಲು ಇದ್ದ ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್, ಪುರಸಭೆ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ರೈತ ಮಹದೇವಸ್ವಾಮಿ ಒತ್ತಾಯಿಸಿದರು.
ಈ ಸಂದರ್ಭ ರೈತರಾದ ಪುಟ್ಟಮಾದೇಗೌಡ, ಸುಂದರಮ್ಮ, ಉಮೇಶ್, ನಂಜುಡಸ್ವಾಮಿ, ಮಲ್ಲೇಯ್ಯ, ಮಹದೇವ, ಕನಕಪಾಪು, ಗುರುಪ್ರಸಾದ್‌ಅಯ್ಯಂಗಾರ್, ಪ್ರಕಾಶ್, ನಂಜೇಗೌಡ ಹಾಗೂ ಇತರರು ಇದ್ದರು.