ಎಚ್.ಡಿ.ಕೋಟೆ ತಾಲೂಕಿನ ಹೆಗ್ಗಡ ಪುರ ಗ್ರಾಮದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ರವಿ, ಕುಮಾರ್ ಇತರರು ಇದ್ದರು. 
ಮೈಸೂರು

ಗಟ್ಟಿ ನಿರ್ಧಾರದಿಂದ ತಂಬಾಕು ಬಳಕೆ ನಿಯಂತ್ರಣ ಸಾಧ್ಯ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • Tobacco
ಎಚ್.ಡಿ.ಕೋಟೆ: ಯಾವುದೇ ರೀತಿಯಾದ ತಂಬಾಕು ಉತ್ಪನ್ನಗಳನ್ನು ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಂಡಾಗ ಮಾತ್ರ ತಂಬಾಕು ಸೇವನೆಯಿಂದ ದೂರವಿರಲು ಸಾಧ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಹೆಗ್ಗಡ ಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬ ಸದಸ್ಯರಾಗಲಿ, ಸ್ನೇಹಿತರಾಗಲಿ, ಸಹಪಾಠಿಗಳಾಗಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸದಂತೆ ಪ್ರೇರೇಪಿಸುತ್ತೇನೆ. ನನ್ನ ಮನೆ, ಶಾಲೆ, ಕಚೇರಿ ಒಟ್ಟಾರೆ ನಮ್ಮ ಪರಿಸರವನ್ನು ತಂಬಾಕು ಉತ್ಪನ್ನಗಳಿಂದ ಕಲುಷಿತಗೊಳ್ಳದಂತೆ ರಕ್ಷಿಸುತ್ತೇನೆ ಎಂದು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.
ಕರ್ನಾಟಕದಲ್ಲಿ ಸುಮಾರು 1.5 ಲಕ್ಷ ಕ್ಯಾನ್ಸರ್ ರೋಗಿಗಳಿದ್ದು, ಪ್ರತಿವರ್ಷ 35,000 ಹೊಸ ಕ್ಯಾನ್ಸರ್ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ. ಇದರಲ್ಲಿ ಶೇ.50ರಷ್ಟು ಗಂಡಸರು, 25 ರಷ್ಟು ಹೆಂಗಸರು ತಂಬಾಕು ಸೇವನೆಯ ದುಷ್ಪರಿಣಾಮದಿಂದ ಉಂಟಾದ ಕ್ಯಾನ್ಸರ್ ರೋಗದಿಂದ ನರಳುತ್ತಿದ್ದಾರೆ. ಭಾರತದಲ್ಲಿ ಪ್ರತಿದಿನ ತಂಬಾಕಿನ ಸೇವನೆಯ ದುಷ್ಪರಿಣಾಮದಿಂದಾಗಿ 200 ಜನರು ಸಾವನ್ನಪ್ಪುತ್ತಿದ್ದಾರೆ, 25 ಜನರು ಹೃದಯ ಬೇನೆಗೆ ತುತ್ತಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಾಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದ್ರಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಪಂ ಸದಸ್ಯರಾದ ರವಿ, ಕುಮಾರ್, ಮಂಜು ನಾಯ್ಕ, ಆರೋಗ್ಯ ಇಲಾಖೆಯ ಸಿಬ್ಬಂದಿ ಶರಣಪ್ಪ ರಾಮಣಿ, ರವಿರಾಜ್, ಅಸೀಮಾ ಸುಲ್ತಾನ್, ರೇಖಾ, ನಾಗಮ್ಮ ರಾಜು, ಶಿಕ್ಷಕರಾದ ಸೋಮಶೇಖರ್, ತಾಪಂ ಮಾಜಿ ಸದಸ್ಯೆ ಪುಟ್ಟಲ್ಲಮ್ಮ, ಗ್ರಾಮದ ಮುಖಂಡರಾದ ದೇವಸುಂದರ್, ದೇವನಾಯ್ಕ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.