ಹನಗೋಡು ಹೋಬಳಿಯ ಕರಣಕುಪ್ಪೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಸಾಹಿತಿ ಕಲ್ಕುಣಿಕೆ ಜೆ ಮಹದೇವ್ ಮಾತನಾಡಿದರು. ರಾಜಣ್ಣ, ತೇಜಾವತಿ, ರತ್ನಮ್ಮ ಇದ್ದಾರೆ.
ಹನಗೋಡು: ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ, ಅವರನ್ನು ಈ ದುಶ್ಚಟದಿಂದ ರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಾಹಿತಿ ಕಲ್ಕುಣಿಕೆ ಜೆ.ಮಹದೇವ್ ತಿಳಿಸಿದರು.
ಹನಗೋಡು ಹೋಬಳಿಯ ಕರಣಕುಪ್ಪೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ವಿಶ್ವದಲ್ಲಿ ಪ್ರತಿವರ್ಷ ಸುಮಾರು 80 ಲಕ್ಷ ಜನರು ಸಾಯುತ್ತಿದ್ದಾರೆ. ಭಾರತದಲ್ಲೇ 13 ಲಕ್ಷಕ್ಕೂ ಹೆಚ್ಚು ಮಂದಿ ತಂಬಾಕಿನ ದುಷ್ಪರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ. ಬೀಡಿ, ಸಿಗರೇಟು, ಗುಟ್ಕಾ, ಜರ್ದಾ, ಹುಕ್ಕಾ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳಲ್ಲಿ ವಿಷಕಾರಿ ಹಾಗೂ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿದ್ದು, ಅವು ಶ್ವಾಸಕೋಶ, ಗಂಟಲು, ನಾಲಿಗೆ ಹಾಗೂ ಅನ್ನನಾಳದ ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ರೋಗಗಳಿಗೆ ಕಾರಣವಾಗುತ್ತವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಪ್ರಗತಿಪರ ರೈತ ರಾಜಣ್ಣ ಮಾತನಾಡಿ, ತಂಬಾಕು ನಿಯಂತ್ರಣಕ್ಕಾಗಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಯುವಜನರನ್ನು ಈ ಚಟದಿಂದ ದೂರವಿಡುವುದು ದೊಡ್ಡ ಸವಾಲಾಗಿದೆ. ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜು, ಕಾರ್ಖಾನೆ, ಬಸ್ ಹಾಗೂ ರೈಲುಗಳಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ತೇಜಾವತಿ, ರತ್ನಮ್ಮ, ವಲಯ ಮೇಲ್ವಿಚಾರಕ ಶ್ರೀನಾಥ್, ಸೇವಾಪ್ರತಿನಿಧಿ ಶಿವರಾಜ್ ಸೇರಿದಂತೆ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.