ಅರಣ್ಯ ಸಿಬ್ಬಂದಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವುದು 
ಮೈಸೂರು

ಹುಲಿ ದಾಳಿಯಿಂದ ಕಾಡಂಚಿನ ಗ್ರಾಮಗಳಲ್ಲಿ ಬಿಗಿ ಗಸ್ತು

ಪ್ರಮುಖ ಮುಖ್ಯಾಂಶಗಳು

  • ಪದೇ ಪದೆ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಮೇಲಧಿಕಾರಿಗಳಿಂದ ಸೂಚನೆ
  • ಕಾಡಂಚಿನ ಗ್ರಾಮಗಳಲ್ಲಿ ತಂಡಗಳಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು
  • ರೈತರ ಜಮೀನು, ತೋಟ, ಗ್ರಾಮಗಳ ಸರಹದ್ದು, ಪಾಳು ಬಿದ್ದ ಜಾಗಗಳು, ಕೆರೆ ಕಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಂಬಿಂಗ್
ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ಪದೇ ಪದೆ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅದರ ನಿಯಂತ್ರಣಕ್ಕೆ ಆರಣ್ಯ ಇಲಾಖೆಯಿಂದ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಎಚ್.ಡಿ.ಕೋಟೆ ತಾಲೂಕಿನ ತಾರಕ, ಸತ್ತಿಗೆಹುಂಡಿ, ಪೆಂಜಹಳ್ಳಿ, ಹುಣಸೇಕುಪ್ಪೆ, ಸೋಗಹಳ್ಳಿ, ಕೆಂಪೇಗೌಡನ ಹುಂಡಿ, ಮಂಚೇಗೌಡನಹಳ್ಳಿ, ಹೊನ್ನಮ್ಮನಕಟ್ಟೆ, ಹೊಸಹೊಳಲು, ರಾಗಲಕುಪ್ಪೆ, ಮಗ್ಗೆ, ಮಳಲಿ, ಎನ್.ಬೆಳ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಯು ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯಿಂದ ಮೂರು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ.
ತಾರಕ ಶಾಖೆಯ ವ್ಯಾಪ್ತಿಯಲ್ಲಿ ಒಂದು ತಂಡ ಮತ್ತು ಉದ್ಬೂರು ಶಾಖೆಯ ವ್ಯಾಪ್ತಿಯಲ್ಲಿ ಎರಡು ತಂಡಗಳನ್ನು ನೇಮಿಸಿಕೊಂಡು ವಲಯದ ಅರಣ್ಯದ ಹೊರಭಾಗದಲ್ಲಿ, ರೈತರ ಜಮೀನು, ಗ್ರಾಮಗಳ ಗಡಿ ಭಾಗದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳುವುದರ ಮೂಲಕ ಹುಲಿಯನ್ನು ಸುರಕ್ಷಿತವಾಗಿ ವಾಪಸ್ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದೆ.
ಆದರೆ ಹುಲಿಯು ಪದೇ ಪದೆ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳಿದ್ದು, ಅನಾಹುತಗಳನ್ನು ತಪ್ಪಿಸುವ ಸಲುವಾಗಿ ವಲಯದ ಸಿಬ್ಬಂದಿಯನ್ನು ಪ್ರತಿ ದಿನ ರಾತ್ರಿ ಗಸ್ತು ತಿರುಗಲು ನೇಮಿಸಲಾಗಿದೆ. ತಂಡವು ಪ್ರತಿದಿನ ಗಸ್ತು ಮಾಡುವ ಮೂಲಕ ನಿಗಾ ಇಡಲಾಗಿರುತ್ತದೆ.
ಅದಾಗಿಯೂ ಅರಣ್ಯದಂಚಿನ ಗ್ರಾಮಗಳ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ರೈತರು, ಸಾರ್ವಜನಿಕರು ಹಾಗೂ ಮಕ್ಕಳು ಎಚ್ಚರಿಕೆಯಿಂದ ಓಡಾಡಬೇಕಿದೆ. ಒಬ್ಬಂಟಿಯಾಗಿ ಯಾರು ಓಡಾಡಬಾರದು. ಅರಣ್ಯದ ಹೊರಭಾಗದಲ್ಲಿ ಹುಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಸಾರ್ವಜನಿಕರು, ಅರಣ್ಯ ಇಲಾಖೆಗೆ ತಿಳಿಸಬೇಕು. ಅಲ್ಲದೇ  ಪಾಲಿಸಬೇಕಾದ ಕರ್ತವ್ಯಗಳ ಕುರಿತು ಎಚ್ಚರಿಕೆ ಕರಪತ್ರಗಳನ್ನು ಅರಣ್ಯದಂಚಿನ ಗ್ರಾಮಗಳು, ಶಾಲೆಗಳು, ವಾಹನ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗಿದ್ದು, ಇದನ್ನು ಪಾಲಿಸಬೇಕು ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಸಿಬ್ಬಂದಿಗಳನ್ನು ಅರಣ್ಯದ ಹೊರಭಾಗದ ಆನೆ ತಡೆ ಕಂದಕ, ರೈತರ ಜಮೀನು, ತೋಟ, ಗ್ರಾಮಗಳ ಸರಹದ್ದು, ಪಾಳು ಬಿದ್ದ ಜಾಗಗಳು, ಕೆರೆ ಕಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಂಬಿಂಗ್ ಮಾಡುವಂತೆ ಸೂಚಿಸಲಾಗಿದೆ. ಅರಣ್ಯದ ಒಳಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹುಲಿಗಳ ಚಲನವಲನವನ್ನು ಗಮನಿಸುವುದು ಹಾಗೂ ಅರಣ್ಯ ಹೊರಭಾಗದಲ್ಲಿ ಕಾಣಿಸಿಕೊಳ್ಳುವ ಹುಲಿಗಳ ಚಲನವಲನದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಅರಣ್ಯ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.