ನಗರದ ಬಿಇಎಂಎಲ್ ಕಾರ್ಖಾನೆ ಆವರಣದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ. 
ಮೈಸೂರು

ಮೈಸೂರಿನಲ್ಲಿ ಎರಡು ದಿನವೂ ಪತ್ತೆಯಾಗದ ಹುಲಿ

ಪ್ರಮುಖ ಮುಖ್ಯಾಂಶಗಳು

  • ಬಿಇಎಂಎಲ್ ಆವರಣದಲ್ಲಿ ಬೋನು, ಕ್ಯಾಮರಾ ಟ್ರ್ಯಾಪ್ ಅಳವಡಿಕೆ
  • 10 ಕ್ಯಾಮರಾ ಟ್ರ್ಯಾಪ್ ಅಳವಡಿಸಿದ್ದು, ಎರಡು ಬೋನು ಇಟ್ಟು ಹುಲಿ ಸೆರೆ ಹಿಡಿಯಲು ಮುಂದಾಗಿದೆ
ಮೈಸೂರು: ನಗರದ ಬಿಇಎಂಎಲ್ ಕಾರ್ಖಾನೆ ಆವರಣದಲ್ಲಿ ಕಾಣಿಸಿಕೊಂಡಿರುವ ಹುಲಿ ಪತ್ತೆಗೆ ಅರಣ್ಯ ಇಲಾಖೆ ಕಾರ್ಯತಂತ್ರ ರೂಪಿಸಿದೆ.
ಜಿಲ್ಲೆಯ ಬಂಡೀಪುರ ಹಾಗೂ ನಾಗರಹೊಳೆ ಕಾಡಂಚಿನ ಭಾಗದಲ್ಲಿ ಹುಲಿಯ ಉಪಟಳ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ನಗರದ ಹೊರವಲಯದಲ್ಲೂ ಹುಲಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಈ ಸಂಬಂಧ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದೆ.
10 ಕ್ಯಾಮರಾ ಟ್ರ್ಯಾಪ್ ಅಳವಡಿಸಿದ್ದು, ಎರಡು ಬೋನು ಇಟ್ಟು ಹುಲಿ ಸೆರೆ ಹಿಡಿಯಲು ಮುಂದಾಗಿದೆ. ಆದರೆ ಈವರೆಗೆ ಹುಲಿಯ ಜಾಡು ಪತ್ತೆಯಾಗಿಲ್ಲ. ಬಿಇಎಂಎಲ್ ಆವರಣದಲ್ಲಿ ಹುಲಿಯೊಂದು ಸಂಚರಿಸುತ್ತಿದೆ ಎನ್ನಲಾದ ವಿಡಿಯೋ ತುಣುಕೊಂದು ಶನಿವಾರ ಸಂಜೆ ವೈರಲ್ ಆಗಿತ್ತು. ವಿಷಯ ತಿಳಿದು ಬಿಇಎಂಎಲ್ ಆವರಣಕ್ಕೆ ಹೋಗಿದ್ದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದರು. ವಿಡಿಯೋದಲ್ಲಿ ಕಂಡು ಬಂದ ರಸ್ತೆ ಪರಿಶೀಲಿಸಿದ್ದಲ್ಲದೆ, ಸಂಸ್ಥೆಯ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಎರಡು ಕ್ಯಾಮರಾದಲ್ಲಿ ಹುಲಿ ಓಡಾಡುವ ದೃಶ್ಯ ಸೆರೆ ಸಿಕ್ಕಿರುವುದನ್ನು ವೀಕ್ಷಿಸಿ, ಹುಲಿ ಇರುವುದನ್ನು ಖಚಿತಪಡಿಸಿಕೊಂಡು ಸೆರೆಗೆ ಎರಡು ಕಡೆ ಬೋನು ಇರಿಸುವ ಜತೆಗೆ 10 ಕಡೆ
ಕ್ಯಾಮರಾ ಟ್ರ್ಯಾಪ್ ಅಳವಡಿಸಿದ್ದಾರೆ.
ಹುಲಿ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರು ವಿಭಾಗದ ಡಿಸಿಎಫ್ ಕೆ.ಪರಮೇಶ್ ನೇತೃತ್ವದಲ್ಲಿ ಇಟಿಎಫ್, ಎಲ್‌ಟಿಎಫ್ ಹಾಗೂ ಮೈಸೂರು ವಿಭಾಗದ ಸುಮಾರು 30 ಸಿಬ್ಬಂದಿ ತಂಡ ಬಿಇಎಂಎಲ್ ಆವರಣದಲ್ಲಿ ಭಾನುವಾರ ಮತ್ತು ಸೋಮವಾರ ಕಾರ್ಯಾಚರಣೆ ನಡೆಸಿದ್ದು, ಈವರೆಗೆ ಹುಲಿಯ ಜಾಡು ಪತ್ತೆಯಾಗಿಲ್ಲ.

ಹೊರ ಹೋಗಿರುವ ಶಂಕೆ

ಭದ್ರತಾ ಸಿಬ್ಬಂದಿ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಹುಲಿ ದೃಶ್ಯ ಹಾಗೂ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಪರಿಶೀಲಿಸಿದಾಗ ಹುಲಿ ಹೋಗುತ್ತಿರುವುದನ್ನು ಗಮನಿಸಿದರೆ ರಾತ್ರಿ ವೇಳೆಯೇ ಹುಲಿ ಕ್ಯಾಂಪಸ್‌ನಿಂದ ಕಾಂಪೌಂಡ್ ಹಾರಿ ಇಲವಾಲದ ಅಲೋಕ ಅಥವಾ ಅರಬ್ಬಿತಿಟ್ಟು ಅರಣ್ಯ ಪ್ರದೇಶಕ್ಕೆ ಹೋಗಿರಬಹುದೆಂಬ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೂ ಬಿಇಎಂಎಲ್ ಸಿಬ್ಬಂದಿ
ಹಾಗೂ ಸುತ್ತಮುತ್ತಲಿನ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ.
ಬೆಮೆಲ್ ಆವರಣದಲ್ಲಿ ಹುಲಿ ಓಡಾಡಿರುವುದು ದೃಢವಾಗುತ್ತಿದ್ದಂತೆ ಅರಣ್ಯ ಇಲಾಖೆ ಚಿರತೆ ಸೆರೆ ಕಾರ್ಯಪಡೆ, ಆನೆ ಸೆರೆ ಕಾರ್ಯಪಡೆಯ ಸಿಬ್ಬಂದಿ ಸೇರಿದಂತೆ 30 ಮಂದಿಯ ತಂಡ ಭಾನುವಾರ ಮತ್ತು ಸೋಮವಾರ ಬೆಮೆಲ್ ಆವರಣದಲ್ಲಿ ಕೂಂಬಿಂಗ್ ನಡೆಸಿದೆ. ಡಿಸಿಎಫ್ ಪರಮೇಶ್ ನೇತೃತ್ವದಲ್ಲಿ ಎಸಿಎಫ್, ಆರ್‌ಎಫ್‌ಒ ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ.
ಮೈಸೂರಿನ ಬಿಇಎಂಎಲ್ ಆವರಣದಲ್ಲಿ ಹುಲಿ ಕಂಡು ಬಂದ ಹಿನ್ನೆಯಲ್ಲಿ ಕೂಂಬಿಂಗ್ ನಡೆಸಲಾಗಿದೆ. ಅಲ್ಲದೆ 10 ಕಡೆ ಕ್ಯಾಮರಾ ಟ್ರ್ಯಾಪ್ ಅಳವಡಿಸಿ, ಎರಡು ಬೋನು ಇಡಲಾಗಿದೆ. ಹುಲಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಫ್ ಕೆ.ಪರಮೇಶ್ ಮಾಹಿತಿ ನೀಡಿದ್ದಾರೆ.