ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜನೆಗೊಂಡಿರುವ ಹುಲಿ ಗಣತಿ ಕಾರ್ಯದ ವೇಳೆ ಗಣಿತಿದಾರರ ಕಣ್ಣಿಗೆ ಬಿದ್ದು ಹುಲಿರಾಯ.
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಯಶಸ್ವಿ
- ಅನುಭವ ಹಂಚಿಕೊಂಡ ಫಾರೆಸ್ಟ್ರಿ ಕಾಲೇಜಿನ ವಿದ್ಯಾರ್ಥಿ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕೈಗೊಂಡಿದ್ದ 6ನೇ ರಾಷ್ಟ್ರೀಯ ಹುಲಿ ಗಣತಿ ಕಾರ್ಯದ ಮೊದಲ ಹಂತದ ಮೂರು ದಿನಗಳ ಗಣತಿಕಾರ್ಯ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಜ.5ರಿಂದ 12ರವರೆಗೆ ರಾಷ್ಟ್ರಾದ್ಯಂತ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ(ಎನ್‌ಟಿಸಿಎ), ವನ್ಯಜೀವಿ ಸಂಸ್ಥೆ(ವೈಲ್ಡ್‌ಲೈಫ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ) ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ 6ನೇ ರಾಷ್ಟ್ರೀಯ ಹುಲಿ ಗಣತಿ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಗಣತಿಕಾರ್ಯದ ಮೊದಲ ಹಂತ ಜ.7ಕ್ಕೆ ಪೂರ್ಣಗೊಂಡಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಗಣತಿಕಾರ್ಯದಲ್ಲಿ ಇಲಾಖೆಯ 300 ಸಿಬ್ಬಂದಿ ಮತ್ತು ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ 30 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ವೈಶಿಷ್ಟ್ಯ ಪೂರ್ಣ ಅನುಭೂತಿ: ಈ ಬಾರಿಯ ಹುಲಿ ಗಣತಿ ಕಾರ್ಯದಲ್ಲಿ ಸ್ವಯಂಸೇವಕನಾಗಿ ಪಾಲ್ಗೊಂಡಿರುವ ಫಾರೆಸ್ಟ್ರಿ ಕಾಲೇಜಿನ ತೃತೀಯ ವರ್ಷದ ಬಿಎಸ್ಸಿ ಫಾರೆಸ್ಟ್ರಿಯ ವಿದ್ಯಾರ್ಥಿ ದೀಕ್ಷಿತ್ ತಾವು ಗಣತಿಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ವಿಶಿಷ್ಟ್ಯ ಅನುಭವನ್ನು ಹೊಂದಿದ್ದಾಗಿ ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಅವರು, ಬಾಲ್ಯದಲ್ಲಿಯೇ ಪಾಲಕರೊಂದಿಗೆ ಪ್ರವಾಸ ಹೋದ ವೇಳೆಯಲ್ಲಿ ಕಾಡಿನಲ್ಲಿ ಸುತ್ತಾಡುವ, ವನ್ಯಪ್ರಾಣಿಗಳನ್ನು ಹತ್ತಿರದಿಂದ ನೋಡುವ ಬಯಕೆಯಿಂದ ಅರಣ್ಯ ಅಧಿಕಾರಿ ಆಗಬೇಕೆಂಬ ಕನಸು ಕಂಡಿದ್ದೆ. ಅದರಂತೆ ಇದೀಗ ವ್ಯಾಸಂಗವನ್ನೂ ಮಾಡುತ್ತಿದ್ದು, ಹುಲಿ ಗಣತಿಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಗಿದೆ. ಮೂರು ದಿನಗಳ ಕಾಲ ಉದ್ಯಾನವನದ ದಟ್ಟಾರಣ್ಯ ಪ್ರದೇಶ(ಕೋರ್ ಏರಿಯಾ)ವಾದ ಮೂರ್ಕಲ್ ವ್ಯಾಪ್ತಿಯಲ್ಲಿ ಗಣತಿಕಾರ್ಯದಲ್ಲಿ ಪಾಲ್ಗೊಂಡೆ. ಡಿಆರ್‌ಎಏಫ್‌ಒ ವೇಣು, ವಾಚರ್ ಮುಕುಂದ ಹಾಗೂ ಮಿತ್ರ ಪದಮ್‌ರೊಂದಿಗೆ ಗಣತಿಕಾರ್ಯದಲ್ಲಿ ಹೊಸ ಅನುಭವ ಪಡೆದೆ ಎಂದರು.
ಗಣತಿಕಾರ್ಯದ ಮೊದಲ ಹಂತದಲ್ಲಿ ನಮಗೆ ನೀಡಿದ ವ್ಯಾಪ್ತಿಯಲ್ಲಿ ಅಲೆದಾಡಿ ವಿವಿಧ ರೀತಿಯ ಬೃಹತ್ ಸಸ್ಯಹಾರಿ(ಆನೆ, ಕಾಟಿ)ಪ್ರಾಣಿಗಳು ಮತ್ತು ಮಾಂಸಾಹಾರಿ ಪ್ರಾಣಿಗಳ ನೇರ ದರ್ಶನ, ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತುಗಳನ್ನು ಕಂಡುಹಿಡಿದೆವು. ಜಿಂಕೆ, ಸಂಬಾರ ಜಿಂಕೆ, ಮಚ್ಚೆಜಿಂಕೆ, ಕರಡಿ ಮುಂತಾದ ಪ್ರಾಣಿಗಳು ಬಿಟ್ಟಿರುವ ತಾಜಾ ಮಲಗಳು ಇದ್ದಲ್ಲಿ ಅವುಗಳನ್ನು ಸಂಗ್ರಹಿಸಲು ನೀಡಿದ ಕಿಟ್‌ನಲ್ಲಿ ಸಂಗ್ರಹಿಸಿಕೊಂಡೆವು. ಪ್ರತಿದಿನ 6 ಕಿ.ಮೀ.ಗಳ ನಡಿಗೆಯೊಂದಿಗೆ ಸಮೀಕ್ಷಾಕಾರ್ಯ ನಡಸಿದ್ದೇವೆ. ನೇರವಾಗಿ ನೋಡಿದ ಪ್ರಾಣಿಗಳು, ಮತ್ತು ವಿವಿಧ ಚಹರೆಗಳನ್ನು ಇಲಾಖೆ ನೀಡಿದ ಎಂ ಸ್ಟ್ರೈಪ್ ಆ್ಯಪ್ ಮೂಲಕ ಅಪ್ ಲೋಡ್ ಮಾಡಿದ್ದೇವೆ. ಎರಡನೇ ದಿನ ನಾವು ಉಳಿದುಕೊಂಡಿದ್ದ ವಾಚರ್ ಮುಕುಂದ್‌ಮನೆ ಬಳಿಯ ಚಿರತೆಬಂಡೆ ರಸ್ತೆಯಲ್ಲಿ ಎರಡು ಹುಲಿಗಳನ್ನು ಕಂಡು ಮೈ ಪುಳಕಿತಗೊಂಡಿತು ಎಂದರು.
ಏರಿಕೆ ನಿಶ್ಚಿತ: ಗಣತಿ ಕಾರ್ಯದ ವೇಳೆ ಸಾಕಷ್ಟು ಮರಿಹುಲಿಗಳ ಪಾದದ ಗುರುತುಗಳನ್ನು ಕಂಡಿದ್ದು, ನಾಗರಹೊಳೆ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯನ್ನು ನಿಶ್ಚಿತವಾಗಿ ಕಾಣಬಹುದೆನ್ನುವುದು ನನ್ನ ಅಭಿಪ್ರಾಯ. ಮಾನವ ವನ್ಯಜೀವಿ ಸಂಘರ್ಷ ದಿನೇ ದಿನೆ ಹೆಚ್ಚುತ್ತಿದ್ದು, ಕಾಡಿನ ಒತ್ತುವರಿಯೇ ಇದಕ್ಕೆ ಮೂಲ ಕಾರಣವಾಗಿದ್ದು, ಇನ್ನಾದರೂ ನಾವು ವನ್ಯಜೀವಿಗಳನ್ನು ಅವುಗಳ ಪಾಡಿಗೆ ಬದುಕಲು ಬಿಡಬೇಕು. ಅವುಗಳ ವಾಸಸ್ಥಾನಕ್ಕೆ ತೊಂದರೆಯಾಗದಂತೆ ನಾವು ಮುತುವರ್ಜಿ ವಹಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವೆಂದರು.
ಅಗ್ರ ಪರಭಕ್ಷಕನಾಗಿರುವ ವ್ಯಾಘ್ರ:ಹುಲಿ ಕಾನನ ಜೀವಸಂಕುಲದ ಆಹಾರ ಸರಣಿಯ ಅಗ್ರ ಪರಭಕ್ಷಕ(ಅಪೆಕ್ಸ್ ಪ್ರಿಡೇಟರ್). ಪರಭಕ್ಷಕ ಎಂದರೆ ಹುಲಿ ಕಾಡಿನ ಯಾವೊಂದು ಪ್ರಾಣಿಯ ಬೇಟೆಯ ಆಹಾರವಲ್ಲ. ಬದಲಾಗಿ ಹುಲಿ ಎಲ್ಲ ಪ್ರಾಣಿಗಳ ಬೇಟೆಯಾಡಿ ತಿನ್ನುವ ಪ್ರಾಣಿ. ಹಾಗಾಗಿ ಕಾಡಿನ ಆಹಾರ ಸರಪಳಿಯಲ್ಲಿ ಹುಲಿ ಅಗ್ರ ಪರಭಕ್ಷಕನಾಗಿ ನಿಲ್ಲುತ್ತಾನೆ. ಕಾಡಿನ ಸಮತೋಲನ ಸಾಧಿಸಲು ಕಾಡಿನಲ್ಲಿರುವ ಹುಲಿಗಳ ಸಂಖ್ಯೆ ಮತ್ತು ಅವುಗಳ ವಾಸಸ್ಥಾನದ ಪರಿಸ್ಥಿತಿಯನ್ನು ಅವಲಂಬಿಸಿದೆ. ಈ ನಿಟ್ಟಿನಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹುಲಿಗಳ ಅತ್ಯುತ್ತಮ ವಾಸಸ್ಥಾನವಾಗಿದ್ದು, ಅರಣ್ಯ ಇಲಾಖೆ ಕೂಡ ಇದನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ. ಗಣತಿಕಾರ್ಯಕ್ಕೆ ಅಗತ್ಯ ಸೌಲಭ್ಯ, ತರಬೇತಿ ಮತ್ತು ಮಾನಸಿಕ ಸ್ಥೈರ್ಯವನ್ನು ನಮ್ಮಂತಹ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಇಲಾಖೆ ಸ್ಫೂರ್ತಿ ನೀಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಯಶಸ್ವಿಯಾದ ಮೊದಲ ಹಂತ 6ನೇ ಹುಲಿ ಗಣತಿ ಕಾರ್ಯದ ಮೊದಲ ಹಂತದ ಮೂರು ದಿನಗಳ ಗಣತಿಕಾರ್ಯ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಗಣತಿದಾರರು ಕಲೆಹಾಕಿದ ಮಾಹಿತಿಗಳನ್ನು ಆ್ಯಪ್‌ಗಳ ಮೂಲಕ ಅಪ್‌ಲೋಡ್ ಮಾಡಲಾಗಿದೆ. ಎರಡನೇ ಹಂತದ ಗಣತಿಕಾರ್ಯ ಜ.9ರಿಂದ ಆರಂಭಗೊಳ್ಳಲಿದೆ. ಈ ಕಾರ್ಯದಲ್ಲಿ ಇಲಾಖೆಯ ತರಬೇತಿ ಪಡೆದ 300 ಸಿಬ್ಬಂದಿ ಮಾತ್ರ ಭಾಗವಹಿಸಲಿದ್ದು, ವಿದ್ಯಾರ್ಥಿಗಳು ಅಥವಾ ಸ್ವಯಂಸೇವಕರು ಪಾಲ್ಗೊಳ್ಳುತ್ತಿಲ್ಲ.
ಲಕ್ಷ್ಮೀಕಾಂತ್, ಎಸಿಎಫ್, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಹುಣಸೂರು