ಹನಗೋಡು ಬಳಿ ಹೆಮ್ಮಿಗೆಯ ಕಾಲನಿ ಬಳಿ ಸೆರೆ ಸಿಕ್ಕ ಹುಲಿ 
ಮೈಸೂರು

ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಹುಲಿ

ಲಲಾಟಾಕ್ಷ ಎಸ್
ಹನಗೋಡು: ಹನಗೋಡು ಸಮೀಪದ ಬೀರತಮ್ಮನಹಳ್ಳಿ ಗ್ರಾಮದ ಅರಣ್ಯದಂಚಿನ ತೋಟದಲ್ಲಿ ಇಟ್ಟಿದ್ದ ಬೋನಿಗೆ ಹುಲಿ ಸೆರೆಯಾಗಿದೆ.
ಹನಗೋಡಿಗೆ ಸಮೀಪದ ಬೀರತಮ್ಮನಹಳ್ಳಿ ಅರಣ್ಯದಂಚಿನ ಗಾಣದಕಟ್ಟೆ ಕಾಲನಿ ಬಳಿಯ ಸಿದ್ದೇಗೌಡ ಎಂಬುವರ ತಾಳೆ ತೋಟದಲ್ಲಿ ತಿಂಗಳ ಹಿಂದೆ ಬೋನು ಇಡಲಾಗಿತ್ತು. ಸುಮಾರು 6-7ವರ್ಷದ ಗಂಡು ಹುಲಿ ಬೋನಿಗೆ ಬಿದ್ದಿದೆ.
ಐದಾರು ತಿಂಗಳಿಂದ ಹನಗೋಡು ಸೇರಿದಂತೆ ಸಮೀಪದ ಹೆಮ್ಮಿಗೆ, ಹೆಮ್ಮಿಗೆ ಕಾಲನಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹತ್ತಾರು ಜಾನುವಾರುಗಳನ್ನು ಬಲಿ ಪಡೆದಿತ್ತು. ತಿಂಗಳ ಹಿಂದೆ ಸಿದ್ದೇಗೌಡ ಎಂಬುವರ ಅರಣ್ಯದಂಚಿನ ತೋಟದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿ ಕರುವಿನ ಮೇಲೆ ದಾಳಿ ನಡೆಸಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದ್ದರೂ ಹುಲಿ ಪತ್ತೆಯಾಗದ ಕಾರಣ ಸೆರೆಗಾಗಿ ಸಿದ್ದೇಗೌಡ ಎಂಬುವರ ತಾಳೆ ತೋಟದಲ್ಲಿ ಬೋನು ಇಟ್ಟಿದ್ದರು.
ಸಿದ್ದೇಗೌಡ ಕುಟುಂಬದವರು ನಿತ್ಯ ಸಂಜೆ ಬೋನಿನಲ್ಲಿ ಕರುವನ್ನು ಕಟ್ಟಿ ಹಾಕಿ ಬೆಳಗ್ಗೆ ವಾಪಸ್ ಮನೆಗೆ ಕರೆ ತರುತ್ತಿದ್ದರು. ಎಂದಿನಂತೆ ಮಂಗಳವಾರ ಬೆಳಗ್ಗೆ ಸಿದ್ದೇಗೌಡ ಅವರ ಮನೆಯವರು ಬೋನಿನಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಕರೆ ತರಲು ಹೋಗುತ್ತಿದ್ದಂತೆ ಹುಲಿಯ ಘರ್ಜನೆ ಕೇಳಿಸಿದೆ. ಬಳಿಕ ನೋಡಿದಾಗ ಹುಲಿ ಸಿಕ್ಕಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಎಸಿಎಫ್ ಲಕ್ಷ್ಮೀಕಾಂತ್, ಆರ್‌ಎಫ್‌ಒಗಳಾದ ಸುಬ್ರಹ್ಮಣ್ಯ, ನಂದಕುಮಾರ್ ಸೇರಿದಂತೆ ಸಿಬ್ಬಂದಿ ದೌಡಾಯಿಸಿ ಜನರನ್ನು ನಿಯಂತ್ರಿಸಿದರು. ಪಶುವೈದ್ಯ ಡಾ.ಆದರ್ಶ್ ಬೋನಿನಲ್ಲಿದ್ದ ಹುಲಿಗೆ ಅರಿವಳಿಕೆ ನೀಡಿ ಜ್ಞಾನ ತಪ್ಪಿಸಿದರು. ಬೋನಿನ ಸರಳಿಗೆ ಸಿಲುಕಿ ಹಲ್ಲಿಗೆ ಪೆಟ್ಟು ಮಾಡಿಕೊಂಡಿದ್ದ ಹುಲಿಗೆ ಚಿಕಿತ್ಸೆ ನೀಡಿದ ನಂತರ ಇಲಾಖೆ ವಾಹನದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕೊಂಡೊಯ್ಯಲಾಯಿತು. ಹುಲಿ ಸೆರೆ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸಿದ್ದರು. ಗ್ರಾಮಸ್ಥರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟರು.
ಹುಲಿ ಸೆರೆ ಹಿಡಿಯಲು ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು. ಸೆರೆಯಾದ ಹುಲಿಗೆ ಐಡಿ ಸಹ ಮಾಡಲಾಗಿತ್ತು. ಸಾಕಷ್ಟು ಬಾರಿ ಕೂಂಬಿಂಗ್ ನಡೆಸಿದ್ದರೂ ಹುಲಿ ಒಮ್ಮೆ ಮಾತ್ರ ಡ್ರೋನ್ ಕ್ಯಾಮರಾದಲ್ಲಿ ಕಾಣಿಸಿಕೊಂಡಿತ್ತು. ತಿಂಗಳ ಹಿಂದೆ ಸೆರೆ ಹಿಡಿಯಲು ಜಮೀನಿನಲ್ಲಿ ಬೋನು ಇಡಲಾಗಿತ್ತು. ಸೆರೆ ಸಿಕ್ಕಿರುವ ಹುಲಿಯು ಗಾಬರಿಯಾಗಿ ಗಾಯ ಮಾಡಿಕೊಂಡಿದೆ. ಚಿಕಿತ್ಸೆ ನೀಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಸಿಎಫ್ ಲಕ್ಷ್ಮೀಕಾಂತ್ ವಿಜಯವಾಣಿಗೆ ತಿಳಿಸಿದರು.