ಎಚ್.ಡಿ.ಕೋಟೆ ತಾಲೂಕಿನ ಹೊಸಹೊಳಲು ಗ್ರಾಮದ ಸಮೀಪ ಗದ್ದೆಯಲ್ಲಿ ಸೋಮವಾರ ಬೆಳಗ್ಗೆ ಬೋನಿಗೆ ಸೆರೆಯಾಗಿರುವ ಹುಲಿ. 
ಮೈಸೂರು

ಬೋನಿಗೆ ಸೆರೆಯಾದ ಹುಲಿ

ಎ. ಆರ್. ರಘುರಾಮ

ಎಚ್.ಡಿ.ಕೋಟೆ :

ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಹಲವು ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೋಮವಾರ ಮುಂಜಾನೆ ಸೆರೆಯಾಗಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವಲಯದ ಹೊಸಹೊಳಲು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯೊಂದು ಕಳೆದ ಹಲವು ದಿನಗಳಿಂದ ಜಾನುವಾರುಗಳನ್ನು ಬಲಿಪಡೆಯುತ್ತಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಜಮೀನುಗಳಿಗೆ ಹೋಗಿಬರಲು ಹೆದರು ಪರಿಸ್ಥಿತಿ ನಿರ್ಮಾಣವಾಗಿತ್ತು. ಹುಲಿಯ ಉಪಟಳದಿಂದ ಬೇಸತ್ತಿದ್ದ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು.
ಹುಲಿಯ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಹೊಸಹೊಳಲು ಗ್ರಾಮದ ಬೈರೇಗೌಡ ಎಂಬವರ ಜಮೀನಿನಲ್ಲಿ ಬೋನು ಅಳವಡಿಸಿದ್ದರು. ಸುಮಾರು 5 ವರ್ಷದ ಗಂಡು ಹುಲಿ ಸೆರೆಯಾಗಿದ್ದು, ಪಶುವೈದ್ಯ ಡಾ.ರಮೇಶ್ ಅವರು ಅರಿ ವಳಿಕೆ ಚುಚ್ಚುಮದ್ದು ನೀಡಿ, ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ಅದನ್ನು ಸ್ಥಳಾಂತರಿಸಲಾಗಿದೆ ಎಂದು ನಾಗರಹೊಳೆ ಡಿಸಿಎಫ್ ಪಿ.ಎ.ಸೀಮಾ ಮಾಹಿತಿ ನೀಡಿದ್ದಾರೆ.
ಎಸಿಎಫ್ ಮಧು, ಆರ್‌ಎಫ್‌ಒ ಗಳಾದ ಹನುಮಂತರಾಜು, ಎಸ್.ಎಸ್.ಸಿದ್ದರಾಜು ಇತರರು ಹಾಜರಿದ್ದರು.