ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಟಿಬೆಟಿಯನ್ನರು ಚೀನಾ ದೇಶ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
- ಚೀನಾದ ಬಂಧನದಲ್ಲಿರುವ ಧರ್ಮಗುರು 11ನೇ ಪಂಚೆನ್ ಲಾಮಾ ಬಿಡುಗಡೆಗೆ ಆಗ್ರಹ
ಮೈಸೂರು: ಚೀನಾದ ಬಂಧನದಲ್ಲಿರುವ ಧರ್ಮಗುರು 11ನೇ ಪಂಚೆನ್ ಲಾಮಾ ಬಿಡುಗಡೆಗೆ ಆಗ್ರಹಿಸಿ ಟಿಬೆಟಿಯನ್ನರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೈಲುಕುಪ್ಪೆ, ಹುಣಸೂರು ಮತ್ತು ಕೊಳ್ಳೇಗಾಲದಲ್ಲಿ ನೆಲೆಸಿರುವ ಟಿಬೆಟಿಯನ್ನರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು. ಮಿಡಲ್ ವೇ ಟಿಬೆಟಿಯನ್ ಯೂತ್ ಕಾಂಗ್ರೆಸ್, ಪ್ರಾದೇಶಿಕ ಟಿಬೆಟಿಯನ್ ಮಹಿಳಾ ಸಂಘ, ಮೈಸೂರು ಟಿಬೆಟಿಯನ್ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆಯಿತು.
ಟಿಬೆಟಿಯನ್ ಪಂಚೆನ್ ಲಾಮಾ ಅಪಹರಣ ಮತ್ತು ಅವರು ನಾಪತ್ತೆಯಾಗಿ ಇಂದಿಗೆ 31 ವರ್ಷ ಪೂರ್ಣವಾಗಿದ್ದು, 1995 ಮೇ 17ರಂದು ಕೇವಲ ಆರು ವರ್ಷದ ಬಾಲಕರಾಗಿದ್ದ ಅವರನ್ನು ಚೀನಾದ ಆಡಳಿತವು ಅಪಹರಿಸಿತು. ಇದರಿಂದ ಅವರು ಜಗತ್ತಿನ ಅತಿ ಕಿರಿಯ ರಾಜಕೀಯ ಕೈದಿಯಾಗಿದ್ದರು. ಇಂದಿಗೂ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಅವರನ್ನು ದಲೈ ಲಾಮಾ ಅವರ ಪುನರ್ಜನ್ಮ ಎಂದು ಗುರುತಿಸಿದ ಮೂರು ದಿನಗಳಲ್ಲೇ ಅವರನ್ನು ಅಪಹರಿಸಲಾಯಿತು. ಟಿಬೆಟಿಯನ್ ಸೆಂಟರ್ ಫಾರ್ ಹೂಮನ್ ರೈಟ್ಸ್ ಆ್ಯಂಡ್ ಡೆಮಾಕ್ರಸಿ ಸಂಸ್ಥೆಯ ಪ್ರಕಾರ, ಟಿಬೆಟ್‌ನಲ್ಲಿ 2500ಕ್ಕೂ ಹೆಚ್ಚು ರಾಜಕೀಯ ಕೈದಿಗಳು ಇದ್ದಾರೆ. 11ನೇ ಪಂಚೆನ್ ಲಾಮಾ ಅವರು ಇರುವ ಸ್ಥಳ, ಆರೋಗ್ಯ ಮತ್ತು ಧಾರ್ಮಿಕ ಶಿಕ್ಷಣದ ಕುರಿತು ಚೀನಾ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣವು ರಾಜಕೀಯ ದಮನ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯ ನಿಜಸ್ವರೂಪವನ್ನು ತೋರಿಸುತ್ತವೆ. ಚೀನಾದ ಆಕ್ರಮಣ, ದಮನದಡಿ ಟಿಬೆಟಿಯನ್ನರು ದೀರ್ಘಕಾಲದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮುದಾಯದ 165 ಆತ್ಮಾಹುತಿ ಮಾಡಿಕೊಂಡ ಘಟನೆಗಳು ಚೀನಾದ ನೀತಿಗಳ ವಿರುದ್ಧದ ಪ್ರತಿಭಟನೆಯಾಗಿದ್ದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯ ತತ್ವ ಉಲ್ಲಂಘನೆಗೆ ವಿರೋಧದ ಪ್ರತಿಬಿಂಬವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೀನಾ ಸರ್ಕಾರವು, 11ನೇ ಪಂಚೆನ್ ಲಾಮಾ, ಎಲ್ಲ ನಿರಪರಾಧಿ ಟಿಬೆಟ್ ಧಾರ್ಮಿಕ ಮತ್ತು ರಾಜಕೀಯ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಟಿಬೆಟ್‌ನ ಸಂಸ್ಕೃತಿ ಮತ್ತು ಭಾಷಾ ಸಂಹಾರವನ್ನು ನಿಲ್ಲಿಸಬೇಕು. ಅಲ್ಲಿನ ಸೂಕ್ಷ್ಮ ಪರಿಸರವನ್ನು ಗೌರವಿಸಿ, ತಕ್ಷಣವೇ ಹಾನಿಕಾರಕ ಗಣಿಗಾರಿಕೆ ಚಟುವಟಿಕೆಗಳು, ಅಲ್ಲಿನ ಪೀಠಭೂಮಿಯ ಮಾಲಿನ್ಯವನ್ನು ನಿಲ್ಲಿಸಬೇಕು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯು ಪಂಚೆನ್ ಲಾಮಾ ಇರುವ ಸ್ಥಳದ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.