ಸಾಂದರ್ಭಿಕ ಚಿತ್ರ 
ಮೈಸೂರು

ಮೈಸೂರಿನಲ್ಲಿ ಮೂವರು ಗಾಂಜಾ ಪೆಡ್ಲರ್‌ಗಳ ಬಂಧನ

ಸದೇಶ್ ಕಾರ್ಮಾಡ್
ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಆಲನಹಳ್ಳಿ ಪೊಲೀಸರು ಶನಿವಾರ ಬಂಧಿಸಿ ಆರೋಪಿಗಳಿಂದ 10.90 ಕೆ.ಜಿ. ತೂಕದ 5.05 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಉದಯಗಿರಿ ಬಳಿಯ ಕೆ.ಎನ್.ಪುರದ ಮಂಜುನಾಥ ಅಲಿಯಾಸ್ ತೋಟಿ ಮಂಜ, ಬೆಂಗಳೂರಿನ ಪಾಪರೆಡ್ಡಿಪಾಳ್ಯದ ಮಂಜುನಾಥ ಅಲಿಯಾಸ್ ಕುಂಟ ಮಂಜ, ನಾಗರಬಾವಿ ಬಳಿಯ ಮೂಡಲಪಾಳ್ಯ ನಿವಾಸಿ ಬಿ.ಆರ್. ಕಾರ್ತಿಕ್ ಬಂಧಿತ ಆರೋಪಿಗಳು. ಇವರು ಶನಿವಾರ ಶಾಂತವೇರಿ ಗೋಪಾಲಗೌಡ ನಗರದ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಆರೋಪಿಗಳನ್ನು ಬಂಧಿಸಲಾಗಿದೆ. ಗಾಂಜಾ ಸಾಗಾಟಕ್ಕೆ ಬಳಕೆ ಮಾಡಿದ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು: ಹಿನಕಲ್ ಅಂಬೇಡ್ಕರ್ ಕಾಲೋನಿಯ ಮನೆಯೊಂದರಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿದ ಕಳ್ಳರು ಶನಿವಾರ ಮನೆಯ ಬೀಗ ತೆರೆದು ಚಿನ್ನಾಭರಣ ಕಳವು ಮಾಡಿದ್ದಾರೆ.
ಅಂಬೇಡ್ಕರ್ ಕಾಲೋನಿ ನಿವಾಸಿ ಅನ್ನಪೂರ್ಣ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಇವರು ಶನಿವಾರ ಮನೆಗೆ ಬೀಗ ಹಾಕಿ ಸೋಸೆ ಪುಷ್ಪಾವತಿ, ಮೊಮ್ಮಗಳು ಅರ್ಪಿತಾ ಜತೆಗೆ ಎಚ್.ಡಿ. ಕೋಟೆಯ ಸರಗೂರು ಗದ್ದೆಹುಂಡಿಯ ಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ಕೀಯನ್ನು ಮನೆಯ ಹೊರಗೆ ಇಡಲಾಗಿತ್ತು. ಇದನ್ನು ಗಮನಿಸಿದ್ದ ಕಳ್ಳರು ಮನೆಯ ಬೀಗ ತೆರೆದು ಬೀರುವಿನಲ್ಲಿಟ್ಟಿದ್ದ 21 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಚೈನ್, 4 ಗ್ರಾಂ ತೂಕದ ಒಂದು ಚಿನ್ನದ ತಾಳಿ, 03.5 ಗ್ರಾಂ ತೂಕದ ಚಿನ್ನದ ಡ್ರಾಪ್ಸ್, 04 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಹಾಗೂ 10 ಗ್ರಾಂ ತೂಕದ 02 ಜೊತೆ ಬೆಳ್ಳಿಯ ಕಾಲ್ ಚೈನ್ ಕಳವು ಮಾಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.