arrested 
ಮೈಸೂರು

ಮೂವರು ಸರಗಳ್ಳರ ಬಂಧನ

ಅವಿನಾಶ್ ಜೈನಹಳ್ಳಿ
ಮೂವರು ಸರಗಳ್ಳರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು 21,28,000 ರೂ. ಮೌಲ್ಯದ 150 ಗ್ರಾಂ. ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 3 ಬೈಕ್‌ಗಳನ್ನು ವಶಪಡೆಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಅಗಸರಹಳ್ಳಿಯ ನಿವಾಸಿ ಎ.ವಿ.ಕೃಷ್ಣಕುಮಾರ್(35), ಕೆ.ಆರ್.ನಗರ ತಾಲೂಕು ಸಾತಿಗ್ರಾಮದ ನಿವಾಸಿಗಳಾದ ಎಸ್.ಆರ್.ನವೀನ್‌ಕುಮಾರ್(36), ಸೈಯದ್ ಫರ್ಹಾನ್(26) ಬಂಧಿತರು.
ಏನಿದು ಪ್ರಕರಣ?: ಕೆ.ಆರ್.ನಗರ ತಾಲೂಕಿನ ಲಾಲನಹಳ್ಳಿ ಗ್ರಾಮದ ನಿವಾಸಿ ಅನ್ನಪೂರ್ಣ ಏ.6ರಂದು ಸಂಜೆ 4.30 ಗಂಟೆ ಸುಮಾರಿನಲ್ಲಿ ಲಾಲನಹಳ್ಳಿ ಗ್ರಾಮದಿಂದ ಕೆ.ಆರ್.ನಗರ ಕಡೆಗೆ ಹೋಗುವ ರಸ್ತೆಯ ಬಳಿ ತಿಪ್ಪೆಗೆ ಕಸ ಸುರಿಯಲು ಹೋಗಿದ್ದಾರೆ. ಈ ವೇಳೆ ಇಬ್ಬರು ಅಪರಿಚಿತರು ಅನ್ನಪೂರ್ಣ ಅವರ ಬಳಿ ಬಂದು ಅವರ ಕತ್ತಿನಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.
ಅನ್ನಪೂರ್ಣ ನೀಡಿದ ದೂರಿನ ಮೇಲೆ ಕೆ.ಆರ್.ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಪೊಲೀಸ್ ನಿರೀಕ್ಷಕ ಎಸ್. ಶಿವಪ್ರಕಾಶ್ ನೇತೃತ್ವದಲ್ಲಿ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು. ಸದರಿ ತಂಡವು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಬಂಧಿತರು 4 ಸರಗಳ್ಳತನ ಹಾಗೂ ಒಂದು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.