ಮೈಸೂರು: ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಯರು ಸೇರಿದಂತೆ 20 ಜನರಿಗೆ ಬರೋಬರಿ 10 ಕೋಟಿ ರೂ. ವಂಚಿಸಿರುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೂಲತಃ ಬೆಂಗಳೂರು ನಿವಾಸಿ ಎಸ್.ಶ್ರುತಿ, ನಗರದ ಕೃಷ್ಣಮೂರ್ತಿಪುರಂ ನಿವಾಸಿ ಪುರೋಹಿತ ರಾಮಚಂದ್ರ ಹೆಗಡೆ, ರಾಜ್‌ಕುಮಾರ್ ಬಂಧಿತ ಆರೋಪಿಗಳು.
ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು ತಮಗೆ 1.5 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಈ ಮೂವರ ವಿರುದ್ಧ ಜಿಲ್ಲಾ ಸೆನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿಗಳು, ಅನೇಕ ಜನರಿಗೆ ವಂಚನೆ ಮಾಡಿರುವುದು ಬಹಿರಂಗವಾಗಿದೆ.
ಹೂಟಗಳ್ಳಿಯಲ್ಲಿ ಕಚೇರಿ ತೆರೆದಿದ್ದ ಆರೋಪಿಗಳು ಅಮಾಯಕರನ್ನು ಸಂಪರ್ಕಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭ ಗಳಿಸಬಹುದು ಎಂಬು ಆಸೆಯನ್ನು ತೋರಿಸಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ, ಚನ್ನಪಟ್ಟಣ, ಚಿಕ್ಕಮಗಳೂರು, ಹಾಸನ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಅನೇಕ ಜನರನ್ನೂ ತಮ್ಮ ಮೋಸದ ಜಾಲದಲ್ಲಿ ಸಿಲುಕಿಸಿಕೊಂಡಿದ್ದಾರೆ.
ಹಣ ಪಡೆದು, ಪ್ರತಿಯಾಗಿ ಬ್ಯಾಂಕ್ ಚೆಕ್ ನೀಡಿದ್ದಾರೆ. ಷೇರಿನ ಲಾಭಾಂಶದ ಹಣ ಕೊಡಲು ಹಿಂದೇಟು ಹಾಕಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
ಡಿಐಜಿ ಡಾ.ಬೋರಲಿಂಗಯ್ಯ ಅವರನ್ನು ಸಂತ್ರಸ್ತರು ಭೇಟಿ ಮಾಡಿ ಮೋಸ ಹೋದ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರಿಗೆ ಸೂಚಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಅವರು, ಜಿಲ್ಲಾ ಸೆನ್ ಠಾಣೆ ಪೊಲೀಸರಿಗೆ ದೂರು ಪಡೆದುಕೊಂಡು ತನಿಖೆ ನಡೆಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಸುನಿಲ್ ಅವರು ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಈ ಆರೋಪಿಗಳಿಂದ ವಂಚನೆಗೆ ಒಳಗಾದವರು ಜಿಲ್ಲಾ ಸೆನ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.