ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭಾವಚಿತ್ರಕ್ಕೆ ಜಯಪ್ಪ ಹೊನ್ನಾಳಿ ಪುಷ್ಪಾರ್ಚನೆ ಮಾಡಿದರು. ಎಸ್.ಮಹದೇವಸ್ವಾಮಿ, ನಗರ್ಲೆ ಶಿವಕುಮಾರ್, ಆಶಾಲತಾ ಇತರರು ಇದ್ದರು. 
ಮೈಸೂರು

ಸಮ ಸಮಾಜದ ಕನಸು ಬಿತ್ತಿದವರು ಶರಣರು: ಎಸ್.ಮಹದೇವಸ್ವಾಮಿ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಜಾತಿ ವ್ಯವಸ್ಥೆಯಿಂದ ನಲುಗಿದ್ದ ಸಮಾಜದಲ್ಲಿ ಮನುಕುಲದ ಏಳಿಗೆಗಾಗಿ ಸಮಸಮಾಜದ ಕನಸು ಬಿತ್ತಿದವರು ಶರಣರು
  • ಜನಸಾಮಾನ್ಯರ ಮನದಾಳದಲ್ಲಿ ಉಳಿಯುವಂತೆ ವಚನಗಳನ್ನು ನೀಡಿದ್ದರಿಂದ ಅವು ಹೆಚ್ಚು ಜನರಿಗೆ ತಲುಪಿದವು
ಮೈಸೂರು:ವಚನಗಳು ಕನ್ನಡ ಸಾಹಿತ್ಯಕ್ಕೆ ಮೆರುಗು ನೀಡಿದ್ದಲ್ಲದೆ ವಿಶ್ವಮಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಗಟ್ಟಿಗೊಳ್ಳುವಂತೆ ಮಾಡಿದೆ ಎಂದು ಜೆಎಸ್‌ಎಸ್ ಪ್ರಧಾನ ವಿದ್ಯಾರ್ಥಿನಿಲಯದ ನಿಲಯ ಪಾಲಕ ಎಸ್.ಮಹದೇವಸ್ವಾಮಿ ಬಣ್ಣಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದಿಂದ ಜೆಎಸ್‌ಎಸ್ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆಯಿಂದ ನಲುಗಿದ್ದ ಸಮಾಜದಲ್ಲಿ ಮನುಕುಲದ ಏಳಿಗೆಗಾಗಿ ಸಮಸಮಾಜದ ಕನಸು ಬಿತ್ತಿದವರು ಶರಣರು. ಅದನ್ನು ಸಾಕಾರಗೊಳಿಸಲು ಕ್ಲಿಷ್ಟ ಭಾಷೆಯಲ್ಲಿ ರಚನೆಗೊಳ್ಳುತ್ತಿದ್ದ ಸಾಹಿತ್ಯಕ್ಕೆ ಬದಲಾಗಿ, ಸಾಮಾನ್ಯ ಜನರಿಗೂ ಸುಲಭಗವಾಗಿ ಅರ್ಥವಾಗುವಂತೆ ತಿಳಿಸಿಕೊಟ್ಟರು ಎಂದರು.
ಜನಸಾಮಾನ್ಯರ ಮನದಾಳದಲ್ಲಿ ಉಳಿಯುವಂತೆ ವಚನಗಳನ್ನು ನೀಡಿದ್ದರಿಂದ ಅವು ಹೆಚ್ಚು ಜನರಿಗೆ ತಲುಪಿದವು. ಅಲ್ಲದೆ ಜೀವನದಲ್ಲಿ ವಚನಗಳಲ್ಲಿ ತಿಳಿಸಿದ ಆದರ್ಶಗಳನ್ನು ಪಾಲಿಸಿಕೊಂಡರು. ಇದು ಧಾರ್ಮಿಕ ಭಾವನೆ ಮೂಡಿಸುವ ಜತೆಗೆ ವಚನಗಳು ಕನ್ನಡ ಸಾಹಿತ್ಯಕ್ಕೆ ಮೆರುಗು ನೀಡಿದವು. ಈ ಮೂಲಕ ವಿಶ್ವಮಟ್ಟ ಕನ್ನಡ ಸಾಹಿತ್ಯ ಮತ್ತಷ್ಟು ಗಟ್ಟಿಗೊಳಿಸಿದವು ಎಂದು ಹೇಳಿದರು.
ಶರಣರ ದೃಷ್ಟಿಯಲ್ಲಿ ಆಧ್ಯಾತ್ಮ ವಿಷಯ ಕುರಿತು ಸಾಹಿತಿ ನಗರ್ಲೆ ಶಿವಕುಮಾರ್ ದತ್ತಿ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿದ್ದ ಶರಣರ ವಚನಗಳನ್ನು ವಿವರಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕ ಅಧ್ಯಕ್ಷ ಜಯಪ್ಪ ಹೊನ್ನಾಳಿ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಆಶಾಲತಾ ಇದ್ದರು.