ನಗರದ ಜೆಎಸ್‌ಎಸ್ ಕಾನೂನು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಶ್ರೀ ರಾಜರಾಜೇಶ್ವರಿ ಅಕ್ಕನ ಬಳಗದ 16ನೇ ವಾರ್ಷಿಕೋತ್ಸವ ಸಮಾರಂಭ ನೆರವೇರಿತು. ಶ್ರೀ ಶ್ರೀಕಂಠ ಸ್ವಾಮಿ, ಡಾ.ಜಯಪ್ಪ ಹೊನ್ನಾಳಿ, ಮಂಗಳ ಮುದ್ದು ಮಾದಪ್ಪ, ಶೋಭಾರಾಣಿ ಜೈಪ್ರಕಾಶ್, ಮಾದಲಾಂಬಿಕ ನಿರಂಜನ್ ಮೂರ್ತಿ, ವೀಣಾ ನಂದೀಶ್ ಇತರರಿದ್ದರು.
- ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ಬೇಸರ
- ಶ್ರೀ ರಾಜರಾಜೇಶ್ವರಿ ಅಕ್ಕನ ಬಳಗದ 16ನೇ ವಾರ್ಷಿಕೋತ್ಸವ
ಮೈಸೂರು: ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಹೋರಾಡಿದ ಮಹನೀಯರನ್ನು ಇದೀಗ ಒಂದು ಜಾತಿಯಲ್ಲಿ ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ಅಧ್ಯಕ್ಷ ಡಾ.ಜಯಪ್ಪ ಹೊನ್ನಾಳಿ ಬೇಸರ ವ್ಯಕ್ತ ಪಡಿಸಿದರು.
ನಗರದ ಜೆಎಸ್‌ಎಸ್ ಕಾನೂನು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ರಾಜರಾಜೇಶ್ವರಿ ಅಕ್ಕನ ಬಳಗದ 16ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣ, ಸರ್ವಜ್ಞ, ಕನಕದಾಸರು, ಕುವೆಂಪು...ಹೀಗೆ ಅನೇಕ ಮಹನೀಯರು ಸಮಾಜದಲ್ಲಿನ ಜಾತಿ ವ್ಯವಸ್ಥೆ ವಿರುದ್ಧ ಇದ್ದರು. ಜಾತಿಮುಕ್ತ ಸಮಾಜಕ್ಕೆ ದುಡಿದರು. ಆದರೆ, ಇದೀಗ ಅಂತಹ ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ. ಇಂದು ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸ್ನೇಹದ ಮನೋಭಾವ ಮರೆಯಾಗಿದೆ. ಎಲ್ಲರೂ ಮೊಬೈಲ್ ದಾಸರಾಗಿದ್ದೇವೆ. ಅನೇಕರಿಗೆ ಪಕ್ಕದ ಮನೆಯವರ ಸಂಪರ್ಕವೇ ಇಲ್ಲವಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳ ಮೂಲಕ ದೂರದ ಅಮೆರಿಕದ ಸ್ನೇಹಿತರನ್ನು ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಮನೆ ಒಳಗೇ ಇರುವ ಮಕ್ಕಳನ್ನು ಊಟಕ್ಕೆ ಕರೆಯಲು ಫೋನ್ ಮಾಡುವ ಸಂಸ್ಕೃತಿ ಸೃಷ್ಟಿಯಾಗಿದೆ. ಮೊಬೈಲ್‌ಗೆ ನೀಡುವ ಪ್ರಾಮುಖ್ಯತೆ ಯಾರಿಗೂ ನೀಡುತ್ತಿಲ್ಲ. ಇದೀಗ ಮೊಬೈಲ್ ಬೇತಾಳದ ರೀತಿ ಬೆನ್ನೇರಿದೆ. ನಮ್ಮ ಸುತ್ತಮುತ್ತಲಿನ ಲೋಕ ಮರೆತು ಹೋಗುತ್ತಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು.
ಶ್ರೀರಾಜರಾಜೇಶ್ವರಿ ಅಕ್ಕನ ಬಳಗ 16 ವರ್ಷಗಳಿಂದ ಅಭಿನಂದನಾರ್ಹ ಕಾರ್ಯಗಳನ್ನು ಮಾಡುತ್ತಿದೆ. ಮಹಿಳೆಯರಿಗೆ ಸಂಘಟನೆ ಎನ್ನುವುದು ತಂತಿ ಮೇಲಿನ ನಡಿಗೆ ಇದ್ದ ಹಾಗೆ. ಸಂಸಾರದ ಜತೆ ಜತೆಗೆ ಸಂಘಟನೆಯಲ್ಲೂ ಭಾಗಿಯಾಗಬೇಕಿದೆ ಎಂದರು.
ಇದೇ ವೇಳೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಂಗಳ ಮುದ್ದುಮಾದಪ್ಪ ಅವರನ್ನು ಸನ್ಮಾನಿಸಲಾಯಿತು. ಶ್ರೀ ಶ್ರೀಕಂಠ ಸ್ವಾಮಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್, ಶ್ರೀ ರಾಜರಾಜೇಶ್ವರಿ ಅಕ್ಕನ ಬಳಗದ ಗೌರವಾಧ್ಯಕ್ಷೆ ಮಾದಲಾಂಬಿಕ ನಿರಂಜನ್ ಮೂರ್ತಿ, ಅಧ್ಯಕ್ಷೆ ವೀಣಾ ನಂದೀಶ್ ಇತರರಿದ್ದರು.